ವರವರ ರಾವ್ ಅ. 28ರ ವರೆಗೆ ಶರಣಾಗುವ ಅಗತ್ಯವಿಲ್ಲ: ಬಾಂಬೆ ಹೈಕೋರ್ಟ್
ಮುಂಬೈ: ಪುಣೆಯಲ್ಲಿ ಡಿಸೆಂಬರ್ 2017 ರಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಂಧಿತರಾದವರಲ್ಲಿ ಒಬ್ಬರಾಗಿರುವ ಕವಿ-ಸಾಮಾಜಿಕ ಹೋರಾಟಗಾರ ವರವರ ರಾವ್ ಅಕ್ಟೋಬರ್ 28 ರವರೆಗೆ ತಲೋಜಾ ಜೈಲು ಅಧಿಕಾರಿಗಳ ಮುಂದೆ ಶರಣಾಗುವ ಅಗತ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಗುರುವಾರ ತಿಳಿಸಿದೆ.
ನ್ಯಾಯಮೂರ್ತಿಗಳಾದ ನಿತಿನ್ ಜಮ್ದಾರ್ ಮತ್ತು ಸಾರಂಗ್ ಕೊತ್ವಾಲ್ ಅವರ ವಿಭಾಗೀಯ ಪೀಠವು ಸಮಯದ ಕೊರತೆಯಿಂದಾಗಿ ರಾವ್ ಅವರ ಅರ್ಜಿಯನ್ನು ಗುರುವಾರ ಆಲಿಸಲು ಸಾಧ್ಯವಾಗಲಿಲ್ಲ. ತನಗೆ ನೀಡಲಾದ ಜಾಮೀನನ್ನು ವಿಸ್ತರಿಸುವಂತೆ ಕೋರಿ ರಾವ್ ಸಲ್ಲಿಸಿರುವ ಅರ್ಜಿಯನ್ನು ಅಕ್ಟೋಬರ್ 26 ರಂದು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
82ರ ವಯಸ್ಸಿನ ರಾವ್ ಅವರಿಗೆ ವೈದ್ಯಕೀಯ ಕಾರಣಕ್ಕಾಗಿ ಆರು ತಿಂಗಳ ಮಧ್ಯಂತರ ಜಾಮೀನು ಈ ವರ್ಷ ಫೆಬ್ರವರಿ 22 ರಂದು ಹೈಕೋರ್ಟ್ ನೀಡಿತ್ತು. ಅವರು ಸೆಪ್ಟೆಂಬರ್ 5 ರಂದು ಶರಣಾಗಲು ಹಾಗೂ ನ್ಯಾಯಾಂಗ ಬಂಧನಕ್ಕೆ ಮರಳಬೇಕಿತ್ತು.
ಆದಾಗ್ಯೂ, ಜಾಮೀನು ವಿಸ್ತರಿಸುವಂತೆ ಕೋರಿ ರಾವ್ ಅವರು ಕಳೆದ ತಿಂಗಳು ತಮ್ಮ ವಕೀಲ ಆರ್. ಸತ್ಯನಾರಾಯಣನ್ ಹಾಗೂ ಹಿರಿಯ ವಕೀಲ ಆನಂದ್ ಗ್ರೋವರ್ ಮೂಲಕ ಅರ್ಜಿ ಸಲ್ಲಿಸಿದ್ದರು. ಜಾಮೀನಿನ ಮೇಲೆ ತನ್ನ ತವರೂರಾದ ಹೈದರಾಬಾದಿನಲ್ಲಿ ಉಳಿಯಲು ಅನುಮತಿಯನ್ನು ಕೋರಿದ್ದರು.
ಎಲ್ಗರ್ ಪರಿಷತ್-ಮಾವೋವಾದಿ ನಂಟು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ), ವೈದ್ಯಕೀಯ ಜಾಮೀನು ವಿಸ್ತರಿಸಲು ಹಾಗೂ ಹೈದರಾಬಾದ್ ಗೆ ವರ್ಗಾಯಿಸಬೇಕೆಂಬ ರಾವ್ ಅವರ ಮನವಿಯನ್ನು ವಿರೋಧಿಸಿತು. ಅವರ ವೈದ್ಯಕೀಯ ವರದಿಗಳು ಅವರು ಎನ್ಐಎ ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸೂಚಿಸುವುದಿಲ್ಲ ಎಂದು ಹೇಳಿತ್ತು.
0 التعليقات: