Sunday, 24 October 2021

ಟ್ವೆಂಟಿ-20 ವಿಶ್ವಕಪ್: ಭಾರತ ವಿರುದ್ಧ ಪಾಕಿಸ್ತಾನ ಜಯಭೇರಿ


ಟ್ವೆಂಟಿ-20 ವಿಶ್ವಕಪ್: ಭಾರತ ವಿರುದ್ಧ ಪಾಕಿಸ್ತಾನ ಜಯಭೇರಿ

ದುಬೈ: ಆರಂಭಿಕ ಬ್ಯಾಟ್ಸ್ ಮನ್ ಗಳಾದ ಬಾಬರ್ ಆಝಂ (ಔಟಾಗದೆ 68)ಹಾಗೂ ಮುಹಮ್ಮದ್ ರಿಝ್ವಾನ್ (ಔಟಾಗದೆ 79) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಟ್ವೆಂಟಿ-20 ವಿಶ್ವಕಪ್ ನ  ಸೂಪರ್-12ರ ಪಂದ್ಯದಲ್ಲಿ  ಭಾರತದ ವಿರುದ್ಧ 10 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಐಸಿಸಿ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಾಕ್ ಮೊದಲ ಬಾರಿ ಗೆಲುವಿನ ನಗೆ ಬೀರಿ ಇತಿಹಾಸ ನಿರ್ಮಿಸಿತು.

ವಿಶ್ವಕಪ್ ನಲ್ಲಿ ಭಾರತದ ವಿರುದ್ಧ  12 ಬಾರಿ ಸೋತ ನಂತರ ಪಾಕಿಸ್ತಾನ ಯಶಸ್ಸಿನ ರುಚಿ ಕಂಡಿದೆ. ಟ್ವೆಂಟಿ- 20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು 5 ಸೋಲುಗಳನ್ನು ಅನುಭವಿಸಿದ ನಂತರ ಭಾರತದ ವಿರುದ್ಧ ಮೊದಲ  ಬಾರಿ ಪಂದ್ಯವನ್ನು ಗೆದ್ದಿದೆ. ಅಂತರ್ ರಾಷ್ಟ್ರೀಯ ಟಿ-20ಯಲ್ಲಿ ಪಾಕಿಸ್ತಾನ ಮೊದಲ ಬಾರಿ  10 ವಿಕೆಟ್ ಜಯ ದಾಖಲಿಸಿದೆ. ಭಾರತವು ಇಂದು ಟಿ-20 ಯಲ್ಲಿ ಮೊದಲ ಬಾರಿ 10 ವಿಕೆಟ್ ಗಳ  ಸೋಲು ಅನುಭವಿಸಿದೆ.

1992ರಲ್ಲಿ ಸಿಡ್ನಿಯಲ್ಲಿ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾದ ಬಳಿಕ ಭಾರತವು ಪಾಕಿಸ್ತಾನದ ವಿರುದ್ಧ 7 ಏಕದಿನ ವಿಶ್ವಕಪ್ ಹಾಗೂ 5 ಟ್ವೆಂಟಿ-20 ವಿಶ್ವಕಪ್ ಸಹಿತ 12 ವಿಶ್ವಕಪ್ ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇದೀಗ ಬಾಬರ್ ಆಝಂ ಬಳಗ ಭಾರತ ವಿರುದ್ಧ ಆಡಿದ 13ನೇ ವಿಶ್ವಕಪ್  ಪಂದ್ಯದಲ್ಲಿ ಪಾಕಿಸ್ತಾನದ 29 ವರ್ಷಗಳ ಗೆಲುವಿನ ಬರವನ್ನು ನೀಗಿಸಿದೆ.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್  ಮಾಡಿದ ಭಾರತವು ಆರಂಭಿಕ ಬ್ಯಾಟಿಂಗ್ ವೈಫಲ್ಯದಿಂದಾಗಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ  151 ರನ್  ಗಳಿಸಿತು.

ಗೆಲ್ಲಲು 152 ರನ್ ಗುರಿ ಪಡೆದ ಪಾಕಿಸ್ತಾನವು 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ  152 ರನ್ ಗಳಿಸಿದೆ.

ಬಾಬರ್ ಆಝಂ ಹಾಗೂ ರಿಝ್ವಾನ್ ಭಾರತ ವಿರುದ್ಧದ ಟ್ವೆಂಟಿ-20ಯಲ್ಲಿ ಗರಿಷ್ಠ ಜೊತೆಯಾಟ ನಡೆಸಿದರು. ಆಝಂ 40 ಎಸೆತಗಳಲ್ಲಿ(4 ಬೌಂಡರಿ, 2 ಸಿಕ್ಸರ್) ಹಾಗೂ ರಿಝ್ವಾನ್ 41 ಎಸೆತಗಳಲ್ಲಿ(3 ಬೌಂ., 2 ಸಿ.)ಅರ್ಧಶತಕಗಳನ್ನು ಪೂರೈಸಿದರು.

 ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್  ಮಾಡಿದ ಭಾರತವು ಪವರ್ ಪ್ಲೇ ವೇಳೆ ಅಗ್ರ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.



SHARE THIS

Author:

0 التعليقات: