Sunday, 24 October 2021

ಟ್ವೆಂಟಿ-20 ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಕ್ಕೆ ಜಯ

 

ಟ್ವೆಂಟಿ-20 ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಕ್ಕೆ ಜಯ

ಶಾರ್ಜಾ: ಬಾಂಗ್ಲಾದೇಶ ವಿರುದ್ಧದ  ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ 15ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವು 5 ವಿಕೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದೆ.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ  171 ರನ್ ಗಳಿಸಿತು.  ಗೆಲ್ಲಲು 172 ರನ್ ಗುರಿ ಬೆನ್ನಟ್ಟಿದ ಲಂಕಾ ತಂಡ 18.5 ಓವರ್ ಗಳಲ್ಲಿ ಗೆಲುವಿನ ದಡ ಸೇರಿತು. ಚರಿತ್ ಅಸಲಂಕ(ಔಟಾಗದೆ 80, 49 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಭಾನುಕ ರಾಜಪಕ್ಸ(53, 31 ಎಸೆತ, 3 ಬೌಂ. 3 ಸಿ.)ಲಂಕಾ ತಂಡಕ್ಕೆ ಗೆಲುವು ಖಚಿತಪಡಿಸಿದರು.

ಇನಿಂಗ್ಸ್ ನ 4ನೇ ಎಸೆತದಲ್ಲಿ ಲಂಕಾವು ಆರಂಭಿಕ ಬ್ಯಾಟ್ಸ್ ಮನ್ ಕುಸಾಲ್ ಪೆರೇರ(0) ವಿಕೆಟನ್ನು ಕಳೆದುಕೊಂಡಿತು. ಆಗ 2ನೇ ವಿಕೆಟಿಗೆ ನಿಸಾಂಕ(24)ರೊಂದಿಗೆ 69 ರನ್ ಸೇರಿಸಿದ ಅಸಲಂಕಾ ಲಂಕಾವನ್ನು ಕುಸಿತದಿಂದ ಪಾರು ಮಾಡಿದರು. ನಿಸಾಂಕ್, ಅವಿಷ್ಕ ಫೆರ್ನಾಂಡೊ ಹಾಗೂ ವನಿಂದು ಹಸರಂಗ ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದಾಗ ಲಂಕೆಯ ಸ್ಕೋರ್ 4 ವಿಕೆಟ್ ನಷ್ಟಕ್ಕೆ 79. ಆಗ ಐದನೇ ವಿಕೆಟ್ ಗೆ 86 ರನ್ ಜೊತೆಯಾಟ ನಡೆಸಿದ ಅಸಲಂಕಾ ಹಾಗೂ ಭಾನುಕ ರಾಜಪಕ್ಸ ತಂಡವನ್ನು ಆಧರಿಸಿದರು.

ಭರ್ಜರಿ ಇನಿಂಗ್ಸ್ ಆಡಿರುವ ಅಸಲಂಕ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪುರಸ್ಕೃತರಾದರು.


SHARE THIS

Author:

0 التعليقات: