Monday, 11 October 2021

ಕೆಪಿಟಿಸಿಎ ಲ್ ನ 1899 ಹುದ್ದೆಗಳ ಭರ್ತಿಗೆ ಚಾಲನೆ: ಸಚಿವ ಸುನೀಲ್ ಕುಮಾರ್


 ಕೆಪಿಟಿಸಿಎಲ್ ನ 1899 ಹುದ್ದೆಗಳ ಭರ್ತಿಗೆ ಚಾಲನೆ: ಸಚಿವ ಸುನೀಲ್ ಕುಮಾರ್

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ 1899 ಕಿರಿಯ ಪವರ್ ಮ್ಯಾನ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಇಂದು ಅದರ ಮೊದಲ ಹಂತವಾಗಿ, ಸಾಂಕೇತಿಕವಾಗಿ 21 ಜನರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

ಸೋಮವಾರ ನಗರದ ಕಾವೇರಿ ಭವನದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸಭಾಂಗಣದಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಿ ಅವರು ಮಾತನಾಡಿದರು.

ಕೆಪಿಟಿಸಿಎಲ್‍ನ 1899 ಹುದ್ದೆಗಳಿಗೆ 2019ರ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು, ಅಂದಿನಿಂದ  ಇಂದಿನವರೆಗೂ ಈ ನೇಮಕಾತಿ ಪ್ರಕ್ರಿಯೆ ನಾನಾ ಕಾರಣಗಳಿಗಾಗಿ ನನೆಗುದಿಗೆ ಬಿದ್ದಿತ್ತು, ಈ ಬಗ್ಗೆ ಅನೇಕರು ನನ್ನ ಗಮನ ಸೆಳೆದಾಗ ನಾನು ಕೂಡಲೇ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಆದೇಶ ಪತ್ರ ನೀಡುವಂತೆ ಸೂಚನೆ ನೀಡಿದ್ದೆ, ಅದರಂತೆ ಇಂದು 21 ಜನ ಕಿರಿಯ ಪವರ್ ಮ್ಯಾನ್‍ಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಅವರು ಹೇಳಿದರು.

ಅತ್ಯಂತ ಶೀಘ್ರದಲ್ಲೇ ಉಳಿದ 1878 ಜನರಿಗೆ ನೇಮಕಾತಿ ಆದೇಶ ನೀಡಲಾಗುವುದು. ನಮ್ಮ ಸರಕಾರ ಬಂದ ನಂತರ ಅತಿ ದೊಡ್ಡ ಪ್ರಮಾಣದಲ್ಲಿ ಈ ನೇಮಕ ಪ್ರಕ್ರಿಯೆ ನಡೆದಿರುವುದು ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ. ಕೆಪಿಟಿಸಿಎಲ್‍ನಲ್ಲಿ ಖಾಲಿ ಇರುವ ಇತರ ಹುದ್ದೆಗಳ ಭರ್ತಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್ ಹಾಗೂ ಕೆಪಿಟಿಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕಿ ಡಾ.ಎಂ.ಮಂಜುಳಾ ಉಪಸ್ಥಿತರಿದ್ದರು.


SHARE THIS

Author:

0 التعليقات: