Thursday, 7 October 2021

ಅ. 15ರಿಂದ ವಿದೇಶಿಯರಿಗೆ ವೀಸಾ ನೀಡಲು ನಿರ್ಧಾರ : ಗೃಹ ಸಚಿವಾಲಯ


ಅ. 15ರಿಂದ ವಿದೇಶಿಯರಿಗೆ ವೀಸಾ ನೀಡಲು ನಿರ್ಧಾರ :
ಗೃಹ ಸಚಿವಾಲಯ

ಹೊಸದಿಲ್ಲಿ: ಕೋವಿಡ್-19 ಕಾರಣದಿಂದಾಗಿ 19 ತಿಂಗಳಿನಿಂದ ಸ್ಥಗಿತಗೊಳಿಸಿರುವ ಪ್ರವಾಸಿ ವೀಸಾವನ್ನು ಅಕ್ಟೋಬರ್ 15ರಿಂದ ಮತ್ತೆ ನೀಡಲು ಭಾರತ ನಿರ್ಧರಿಸಿದೆ. ಇದರಿಂದಾಗಿ ಅಂತರ್ ರಾಷ್ಟ್ರೀಯ ಪ್ರವಾಸಿಗರಿಗೆ ಭಾರತೀಯ ತಾಣಗಳು ಹಂತ ಹಂತವಾಗಿ ಮುಕ್ತಗೊಳ್ಳಲಿವೆ ಎಂದು ಗೃಹ ಸಚಿವಾಲಯ ಗುರುವಾರ ಪ್ರಕಟಿಸಿದೆ.

ಚಾರ್ಟರ್ಡ್ ವಿಮಾನಗಳಲ್ಲಿ ಆಗಮಿಸುವ ಪ್ರವಾಸಿಗರಿಂದ ಆರಂಭಿಸಿ ಹಂತ ಹಂತವಾಗಿ ವಿದೇಶಿ ಪ್ರವಾಸಿಗರಿಗೆ ವೀಸಾ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಚಾರ್ಟರ್ಡ್ ವಿಮಾನ ಹೊರತುಪಡಿಸಿ ಇತರ ವಿಮಾನಗಳಲ್ಲಿ ಆಗಮಿಸುವವರಿಗೆ ನವೆಂಬರ್ 15ರಿಂದ ವೀಸಾ ನೀಡಲಾಗುತ್ತದೆ. ಚಾರ್ಟರ್ಡ್ ವಿಮಾನ ಹೊರತುಪಡಿಸಿ ಇತರ ವಿಮಾನಗಳೆಂದರೆ, ಭಾರತ ಈಗಾಗಲೇ ಏರ್ ಬಬೂಲ್ ಒಪ್ಪಂದ ಮಾಡಿಕೊಂಡ ದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಆರಂಭಿಕ ಹಂತದಲ್ಲಿ ವೀಸಾ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಬೇಡಿಕೆ ಹೆಚ್ಚಿದಂತೆಲ್ಲ ವಾಣಿಜ್ಯ ವಿಮಾನಗಳ ಸಂಚಾರ ಆರಂಭವಾಗಲಿದ್ದು, ವಾಣಿಜ್ಯ ವಿಮಾನಗಳಲ್ಲಿ ಆಗಮಿಸುವವರಿಗೂ ಮುಂದೆ ವೀಸಾ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಸಚಿವಾಲಯ ಕಾಲದಿಂದ ಕಾಲಕ್ಕೆ ಬಿಡುಗಡೆ ಮಾಡುವ ಕೋವಿಡ್-19ಗೆ ಸಂಬಂಧಿಸಿದ ಎಲ್ಲ ಶಿಷ್ಟಾಚಾರಗಳು ಮತ್ತು ನಿಯಮಾವಳಿಗಳನ್ನು ವಿಮಾನಗಳಲ್ಲಿ ಆಗಮಿಸುವ ಪ್ರವಾಸಿಗರು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಎಂದು ಗೃಹ ಸಚಿವಾಲಯದ ಪ್ರಕಟಣೆ ಹೇಳಿದೆ.

ಕಳೆದ ತಿಂಗಳು ಗೋವಾದ ನಾಗರಿಕರ ಜತೆ ವರ್ಚುವಲ್ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ವಿದೇಶಿ ಪ್ರವಾಸಿಗರನ್ನು ಮರಳಿ ಆಕರ್ಷಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಐದು ಲಕ್ಷ ಮಂದಿಗೆ ಉಚಿತ ಪ್ರವಾಸಿ ವೀಸಾ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರವಾಸೋದ್ಯಮ ಸಂಸ್ಥೆಗಳಿಗೆ 10 ಲಕ್ಷ ರೂಪಾಯಿಗಳ ಸಾಲವನ್ನು ಸರ್ಕಾರದ ಖಾತರಿಯಲ್ಲಿ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದರು.



SHARE THIS

Author:

0 التعليقات: