Saturday, 11 September 2021

ಸದರ್ ಉಸ್ತಾದ್ ಅಂದರೆ ಒಂದು ವಿಸ್ಮಯ


 ಸದರ್ ಉಸ್ತಾದ್ ಅಂದರೆ ಒಂದು ವಿಸ್ಮಯ

ಸದರ್ ಉಸ್ತಾದ್ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದ ಆದಂ ಸಖಾಫಿ ಉಸ್ತಾದರ ಅಗಲುವಿಕೆ  ಇಂದಿಗೂ  ಅರಗಿಸಿಕೊಳ್ಳಲಾಗುತ್ತಿಲ್ಲ.ಬದುಕಿನುದ್ದಕ್ಕೂ ಮಾದರಿಯುತ ವಾದ ಬದುಕನ್ನು ಸವೆದ  ಉಸ್ತಾದರು ನಮ್ಮವರ ಪಾಲಿಗೆ ದಾರಿದೀಪವಾಗಿದ್ದರು. ಸದರ್ ಉಸ್ತಾದರ ಬದುಕು, ನಡುವಳಿಕೆ, ತಾಳ್ಮೆ, ಉತ್ತಮ ಸ್ವಭಾವ, ಮಾತುಗಾರಿಕೆ , ನಾಯಕತ್ವ ಎಲ್ಲವೂ ಓರ್ವ ಮನುಜನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುವುದರಲ್ಲಿ ಎರಡು ಮಾತಿಲ್ಲ. ಕಣ್ಣ ಮುಂದೆ ಕಾಣುವವರಿಗೆಲ್ಲಾ ಸಾಧಾರಣ ವ್ಯಕ್ತಿಯಾಗಿದ್ದ ಉಸ್ತಾದರು ಆಗಾಧವಾದ ಜ್ಞಾನ ಭಂಡಾರದ ಒಡೆಯರಾಗಿದ್ದರು.

'ಮುಹಿಮ್ಮಾತುಲ್ ಮುಸ್ಲಿಮೀನ್ ' ಮದ್ರಸದಲ್ಲಿ ದೀರ್ಘವಾದ ಇಪ್ಪತ್ತು ವರ್ಷಕ್ಕಿಂತ ಮಿಗಿಲಾಗಿ ಸೇವೆಗೈದಿದ್ದಾರೆ. ಕೇರಳ, ಕರ್ನಾಟಕದೆಲ್ಲೆಡೆ ಉಸ್ತಾದರಿಗೆ ಸಾವಿರಾರು ಶಿಷ್ಯ ಬಳಗವಿದೆ.  ಸುಳ್ಯ ಭಾಗದಲ್ಲಿ ಖತೀಬ್  ಆಗಿ ಸೇವೆ ಗೈಯ್ಯುತ್ತಿದ್ದ ವೇಳೆಯಲ್ಲಿ ತ್ವಾ ಹಿರುಲ್ ಅಹ್ದಲ್ ತಂಙಲರು 'ಮುಹಿಮ್ಮಾತುಲ್ ಮುಸ್ಲಿಮೀನ್ ' ಮದ್ರಸದಲ್ಲಿ ಸದರ್ ಉಸ್ತಾದ್ ಆಗಿ ಸೇವೆ ಗೈಯ್ಯಬೇಕೆಂದು, ಉಸ್ತಾದರನ್ನು ಕರೆಸಿಕೊಂಡರು. ಅಂದಿನಿಂದ ತನ್ನ ಮರಣದ ವರೆಗೂ ತ್ವಾಹಿರ್ ತಂಙಲರ ಆದೇಶದಂತೆ ಸೇವೆಗೈಯ್ದರು. ಮರಣ ಹೊಂದಿದರೆ ತ್ಪಾಹಿರ್ ತಂಙಲರ ಸನ್ನಿಧಾನದಲ್ಲೇ ಮಲಗಬೇಕೆಂದು, ಅವರು ಮಾಡಿದ್ದ ವಸಿಯ್ಯತ್ ಅವರೆಡೆಯಲ್ಲಿನ ಭಾಂಧವ್ಯವನ್ನು ಮಣಗಾಣಿಸುತ್ತದೆ. ಸಂಶುದ್ಧವಾದ ಬದುಕನ್ನು ಸವೆದ ಉಸ್ತಾದರು ನಮ್ಮವರ ಪಾಲಿಗೆ ಎಂದೆಂದಿಗೂ ದಾರಿದೀಪವಾಗಿದ್ದರು. ಸ್ವಚ್ಚತೆಗೆ ಉಸ್ತಾದರು ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದ್ದರು. ನೀಟಾದ ವಸ್ತ್ರ ಹಾಗೂ ಅಚ್ಚು ಕಟ್ಟಾದ ಜೀವನ ಶೈಲಿಯನ್ನು ಮೈಗೂಡಿಸಿದ್ದ ಸದರ್ ಉಸ್ತಾದರು ಹೊರಗೂ-ಒಳಗೂ ಪರಿಶುದ್ದರಾಗಿದ್ದರು. ಯಾರಲ್ಲೂ ಹೆಚ್ಚಾಗಿ ಅನಾವಶ್ಯಕವಾಗಿ ಮಾತನಾಡುತ್ತಿರಲ್ಲಿಲ್ಲ. ಮಿತವಾದ ಆಹಾರ ಸೇವನೆಯನ್ನು ರೂಡಿಸಿಕೊಂಡಿದ್ದರು. ಹರಾಂ ಆದ ಆಹಾರ ,ಬಡ್ಡಿ ವ್ಯವಹಾರಗಳಿಂದ ಉಸ್ತಾದರು ದೂರವಿದ್ದರು. ಎಷ್ಟರವರೆಗೆಂದರೆ ಉಸ್ತಾದರಿಗೆ ಬ್ಯಾಂಕ್ ಖಾತೆಯೇ ಇರಲಿಲ್ಲ. ನಡೆಯುವಾಗ ತಾಳ್ಮೆಯಿಂದ ಭೂಮಿಗೂ ನೋವಾಗದಂತೆ ನಡೆಯುತ್ತಿದ್ದರು. ಇವೆಲ್ಲವೂ ಉಸ್ತಾದರ ಬದುಕಿನಲ್ಲಿ ನಾನು ದರ್ಶಿಸಿದ ಸತ್ಪಥಗಳಾಗಿವೆ.

ನನ್ನ ದೀರ್ಘವಾದ ಐದು ವರ್ಷದ ಮದ್ರಸ ಜೀವನದ ಸದರ್ ಉಸ್ತಾದರಾಗಿದ್ದರು ಆದಂ ಸಖಾಫಿ ಉಸ್ತಾದರು. ಅದಲ್ಲದೇ ಒಂದೆರಡು ವರ್ಷಗಳ ಕಾಲ ಬೆಳ್ಳಂ ಬೆಳಿಗ್ಗೆ ಉಸ್ತಾದರ ಮನೆಗೆ ಹಾಲನ್ನು ಕೊಂಡೊಯ್ಯುತ್ತಿದ್ದೆ . ಆ ದಿನಗಳನ್ನು ಮೆಲುಕು ಹಾಕುವಾಗ ತಟ್ಟನೆ ನೆನಪಾಗುವುದು ಉಸ್ತಾದರು ಸುಂದರವಾದ ಶೈಲಿಯಲ್ಲಿ ಓದುತ್ತಿದ್ದ ಕುರ್ಆನಿನ  ಮಧುರ ಶಬ್ದಗಳಾಗಿವೆ. ದೀರ್ಘ ಕಾಲ ಸೋರುವ ಪುಟ್ಟ ಮನೆಯಲ್ಲಿ ಸಂಸಾರವನ್ನು ಕಟ್ಟಿದ್ದ ಉಸ್ತಾದರು ಮರಣಕ್ಕಿಂತ ಮುಂಚಿತವಾಗಿ ಹೊಸದೊಂದು ಮನೆಯ ಕಟ್ಟಿ ಮಡಿದಿಗೂ, ಚಿಕ್ಕ ವಯಸ್ಸಿನ ಐದು ಮಕ್ಕಳಿಗೂ ಅಶ್ರಯವನ್ನೀಡಿ ಹೊರಟು ಬಿಟ್ಟರು.

ಉಸ್ತಾದರ ಆಗಲುವಿಕೆ ನಮ್ಮವರ ಪಾಲಿಗೆ ಬೆಲೆ ಕಟ್ಟಲಾಗದ ನಷ್ಟ. ಅಲ್ಲಾಹನ ವಿಧಿಗೆ ತಲೆಭಾಗಿ ಉಸ್ತಾದರು ಹೊರಟು ಬಿಟ್ಟರು. ಆ ಉಸ್ತಾದರ ಕಬ್ರ್ ಜೀವನ ಅಲ್ಲಾಹನು ಪರಿಶುದ್ಧಗೊಳಿಸಲಿ  ನಾಳೆ ಜನ್ನಾತುಲ್ ಪಿರ್ದೌಸ್ ನಲ್ಲಿ ನಮ್ಮನ್ನೂ ಉಸ್ತಾದರನ್ನೂ ಅಲ್ಲಾಹನು ಒಗ್ಗೂಡಿಸಲಿ. ಆಮೀನ್.

ಜಾಬಿರ್ ಹುಸೈನ್ ಜಾರಿಗೆಬೈಲು
 (ಮುಹಿಮ್ಮಾತ್ ವಿದ್ಯಾರ್ಥಿ)


SHARE THIS

Author:

0 التعليقات: