Tuesday, 14 September 2021

ಮಂಗಳೂರು: ಅಗಲಿದ ಆಸ್ಕರ್ ಫೆರ್ನಾಂಡಿಸ್ ಅಂತಿಮ ದರ್ಶನ ಪಡೆದ ಅಭಿಮಾನಿಗಳು


 ಮಂಗಳೂರು: ಅಗಲಿದ ಆಸ್ಕರ್ ಫೆರ್ನಾಂಡಿಸ್ ಅಂತಿಮ ದರ್ಶನ ಪಡೆದ ಅಭಿಮಾನಿಗಳು

ಮಂಗಳೂರು: ಸೋಮವಾರ ಅಸ್ತಂಗತರಾದ ಕಾಂಗ್ರೆಸ್‌ನ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರವನ್ನು ಅವರ ಹುಟ್ಟೂರು ಹಾಗೂ ಕಾರ್ಯಕ್ಷೇತ್ರವಾಗಿದ್ದ ಉಡುಪಿ, ಮಂಗಳೂರಿನಲ್ಲಿ ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ನೂರಾರು ಮಂದಿ ಅಭಿಮಾನಿಗಳು, ಹಿತೈಷಿಗಳು, ಕಾಂಗ್ರೆಸ್ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.

ಬೆಳಗ್ಗೆ ಉಡುಪಿಯ ಮದರ್ ಆಫ್ ಸೋರೋಸ್ ಚರ್ಚ್‌ನಲ್ಲಿ ಪ್ರಾರ್ಥನೆ, ಸಾರ್ವಜನಿಕ ದರ್ಶನದ ಬಳಿಕ ಮಧ್ಯಾಹ್ನ 3:30ರ ಸುಮಾರಿಗೆ ರಸ್ತೆ ಮಾರ್ಗದ ಮೂಲಕ ಆಸ್ಕರ್ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕರೆತರಲಾಯಿತು. ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪುಷ್ಪನಮನ ಸಲ್ಲಿಸಿದರು. 

ಆರಂಭದಲ್ಲಿ ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ ಧರ್ಮಗುರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವನಾರಾಯಣ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿ, ಆಸ್ಕರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಾರ್ವಜನಿಕರು, ಹಿತೈಷಿಗಳು, ಅಭಿಮಾನಿಗಳು ಸರತಿ ಸಾಲಿನಲ್ಲಿ ಬಂದು ಕಂಬನಿ ಮಿಡಿದರು.

ಮಾಜಿ ಸಚಿವ ರಮಾನಾಥ ರೈ, ಶಾಸಕ ಯು.ಟಿ. ಖಾದರ್, ಐವನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲೆಯ ಎಲ್ಲ ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಕಾರ್ಪೊರೇಟರ್‌ಗಳು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್ ಆಯುಕ್ತ ಶಶಿಕುಮಾರ್ ಅಂತಿಮ ನಮನ ಸಲ್ಲಿಸಿದರು.

ಬಿಗಿ ಭದ್ರತೆ: ಸಂಜೆ 5 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಳಿಕ ಪಾರ್ಥಿವ ಶರೀರವನ್ನು ಫಾದರ್ ಮುಲ್ಲರ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ಸಾರ್ವಜನಿಕ ದರ್ಶನ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಭದ್ರತೆ ವ್ಯವಸ್ಥೆಗೊಳಿಸಲಾಗಿತ್ತು. ಮಲ್ಲಿಕಟ್ಟೆ ರಸ್ತೆಯನ್ನು ವಾಹನ ಸಂಚಾರ ಮುಕ್ತಗೊಳಿಸಿ, ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸೆ.16ರಂದು ಬೆಂಗಳೂರಲ್ಲಿ ಅಂತ್ಯಸಂಸ್ಕಾರ

ಬುಧವಾರ ಬೆಳಗ್ಗೆ 9:30ಕ್ಕೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನಲ್ಲಿ ಆಸ್ಕರ್ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟ ಬಳಿಕ 12 ಗಂಟೆಗೆ ಚರ್ಚ್‌ನಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಅಲ್ಲಿಂದ ಸಂಜೆ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆದೊಯ್ದು ಗುರುವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ. ಇಲ್ಲಿ ರಾಷ್ಟ್ರ, ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆಗಮಿಸುವ ನಿರೀಕ್ಷೆಯಿದೆ. ನಂತರ ಬೆಂಗಳೂರಿನ ಸೈಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.


SHARE THIS

Author:

0 التعليقات: