ಒಗ್ಗಟ್ಟು ಪ್ರದರ್ಶಿಸಲು ರೈತರಿಗೆ ‘ಅಲ್ಲಾಹು ಅಕ್ಬರ್’, ‘ಹರ್ ಹರ್ ಮಹಾದೇವ್’ ಎಂದು ಕೂಗುವಂತೆ ವಿನಂತಿಸಿದ ಟಿಕಾಯತ್
ಲಕ್ನೊ: ಒಗ್ಗಟ್ಟನ್ನು ಪ್ರದರ್ಶಿಸಲು 'ಅಲ್ಲಾಹು ಅಕ್ಬರ್' ಹಾಗೂ ‘ಹರ್ ಹರ್ ಮಹಾದೇವ್' ಎಂದು ಕೂಗಲು' ಕಿಸಾನ್ ಮಹಾಪಂಚಾಯತ್ ನಲ್ಲಿ ನೆರೆದಿದ್ದ ರೈತರು ಹಾಗೂ ಅವರ ಬೆಂಬಲಿಗರಿಗೆ ರೈತ ನಾಯಕ ರಾಕೇಶ್ ಟಿಕಾಯತ್ ವಿನಂತಿಸಿದರು.
ರವಿವಾರ ಸಂಯುಕ್ತ್ ಕಿಸಾನ್ ಮೋರ್ಚಾ ಕರೆ ನೀಡಿದ್ದ ಉತ್ತರಪ್ರದೇಶದ ಮುಝಫ್ಫರ್ ನಗರ ಜಿಲ್ಲೆಯ ಮಹಾಪಂಚಾಯತ್ ಗೆ ಉತ್ತರಪ್ರದೇಶದಿಂದ ಮಾತ್ರವಲ್ಲದೆ, ಅಕ್ಕಪಕ್ಕದ ಉತ್ತರಾಖಂಡ, ಹರ್ಯಾಣ ಹಾಗೂ ಪಂಜಾಬ್ ರಾಜ್ಯಗಳಿಂದಲೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಈ ಪಠಣವನ್ನು ಈ ಹಿಂದೆ ಒಟ್ಟಾಗಿ ಉಚ್ಚರಿಸಲಾಗಿತ್ತು ಹಾಗೂ ಭವಿಷ್ಯದಲ್ಲಿ ಕೂಡ ಒಟ್ಟಾಗಿ ಇದನ್ನು ಪಠಿಸಲಾಗುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ಟಿಕಾಯತ್ ಹೇಳಿದರು.
ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಈ ಜನರು (ಬಿಜೆಪಿ) ಯಾವಾಗಲೂ ಜನರನ್ನು ವಿಭಜಿಸಲು ಕೆಲಸ ಮಾಡಿದ್ದಾರೆ ಹಾಗೂ ಗಲಭೆಗೆ ಕಾರಣರಾಗಿದ್ದಾರೆ. ನಾವು ಅವರನ್ನು ತಡೆಯಬೇಕು. ನಾವು ರಚನಾತ್ಮಕವಾಗಿ ಕೆಲಸ ಮಾಡಬೇಕಾಗುತ್ತದೆ. ಗಲಭೆಗೆ ಕಾರಣರಾದವರಿಗೆ ನಾವು ನಮ್ಮ ಉತ್ತರ ಪ್ರದೇಶವನ್ನು ನೀಡುವುದಿಲ್ಲ'' ಎಂದರು.
"ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಎಲ್ಲಿಯೂ ಹೋಗುವುದಿಲ್ಲ. ನಮ್ಮ ಕೃಷಿ ಉತ್ಪನ್ನಗಳ ಮೇಲೆ ಎಂಎಸ್ಪಿ ಗ್ಯಾರಂಟಿ ಬೇಕು. ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ’’ ಎಂದು ರೈತರ ಪ್ರತಿಭಟನೆಯ ಬಗ್ಗೆ ಟಿಕಾಯತ್ ಹೇಳಿದರು.
"ಪ್ರಧಾನಿ (ನರೇಂದ್ರ ಮೋದಿ) 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದರು. ಸುಮಾರು ಒಂಬತ್ತು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ಆದರೆ ಸರಕಾರವು ನಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸಿದೆ. ಪ್ರತಿಭಟನೆಯ ಸಮಯದಲ್ಲಿ ಮೃತಪಟ್ಟ ನೂರಾರು ರೈತರಿಗೆ ಅವರು ಗೌರವ ಸಲ್ಲಿಸಲಿಲ್ಲ. ಉತ್ತರಪ್ರದೇಶ ಸರಕಾರವು ಕಬ್ಬಿನ ಬೆಲೆಯನ್ನು ಹೆಚ್ಚಿಸಿಲ್ಲ.ಇದು ರೈತರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ'' ಎಂದು ಟಿಕಾಯತ್ ಹೇಳಿದರು.
0 التعليقات: