Tuesday, 7 September 2021

ಇಂದು ಕವಿತಾ ಲಂಕೇಶ್ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

 

ಇಂದು ಕವಿತಾ ಲಂಕೇಶ್ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

ಹೊಸದಿಲ್ಲಿ : ಹಂತಕರ ಗುಂಡಿಗೆ ಬಲಿಯಾದ ವಿಚಾರವಾದಿ ನಾಯಕಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೋಹನ್ ನಾಯಕ್ ವಿರುದ್ಧದ ಆರೋಪಗಳನ್ನು ಕೈಬಿಡುವ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮೃತ ನಾಯಕಿಯ ಸಹೋದರಿ ಕವಿತಾ ಲಂಕೇಶ್ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬುಧವಾರ ಆರಂಭವಾಗಲಿದೆ.

ದೇಶದ ಅತ್ಯುನ್ನತ ನ್ಯಾಯಾಲಯ ಕಳೆದ ತಿಂಗಳು ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ನಿಗದಿಪಡಿಸಿತ್ತು. ನ್ಯಾಯಮೂರ್ತಿ ಎ.ಎಂ.ಖನ್ವೀಲ್ಕರ್ ಅವರು ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದರು.

ಕಳೆದ ಏಪ್ರಿಲ್‌ನಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಚಿತ್ರ ನಿರ್ಮಾಪಕಿಯಾಗಿರುವ ಕವಿತಾ ಲಂಕೇಶ್ ಮೇಲ್ಮನವಿ ಸಲ್ಲಿಸಿದ್ದರು. ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅನ್ವಯ ಮೋಹನ್ ನಾಯಕ್ ವಿರುದ್ಧ ಮಾಡಲಾದ ಆರೋಪಗಳನ್ನು ರದ್ದುಪಡಿಸಲು ಹೈಕೋರ್ಟ್ ಆದೇಶಿಸಿತ್ತು.

ವಿಶೇಷ ತನಿಖಾ ತಂಡದ ತನಿಖೆಯ ಪ್ರಕಾರ, ಮೋಹನ್ ನಾಯಕ್, ಗೌರಿ ಲಂಕೇಶ್ ಹತ್ಯೆ ಪ್ರಕರಣ, ವಿಚಾರವಾದಿ ಮುಖಂಡ ನರೇಂದ್ರ ಧಾಬೋಲ್ಕರ್ ಮತ್ತು ಗೋವಿಂದ್ ಪನ್ಸಾರೆ ಅವರ ಹತ್ಯೆ ಸೇರಿದಂತೆ ಸಂಘಟಿತ ಅಪರಾಧಗಳ ಹಲವು ನಿದರ್ಶನಗಳಲ್ಲಿ ಸಿಂಡಿಕೇಟ್‌ನ ಭಾಗವಾಗಿದ್ದ ಎನ್ನುವುದು ಕವಿತಾ ಲಂಕೇಶ್ ಅವರ ಪ್ರತಿಪಾದನೆಯಾಗಿದೆ. ಮೋಹನ್‌ ನಾಯಕ್, ಗೌರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಅಮೋಲ್ ಕಾಳೆ ಮತ್ತು ರಾಜೇಶ್ ಬಂಗೇರಾ ಅವರ ನಿಕಟವರ್ತಿ ಎಂದು ಕವಿತಾ ಅರ್ಜಿಯಲ್ಲಿ ವಾದಿಸಿದ್ದಾರೆ. ಪ್ರಮುಖ ಆರೋಪಿಗಳಿಗೆ ಆಸರೆ ನೀಡುವ ಮೂಲಕ ಈತ ನಿರಂತರವಾಗಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.



SHARE THIS

Author:

0 التعليقات: