Tuesday, 14 September 2021

ಆದಿತ್ಯನಾಥ್ ವಿವಾದಾತ್ಮಕ ʼರೇಷನ್' ಹೇಳಿಕೆಯಿಂದ ಟ್ವಿಟ್ಟರ್ ನಲ್ಲಿ ʼಹಮಾರೆಅಬ್ಬಾಜಾನ್ʼ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್


 ಆದಿತ್ಯನಾಥ್ ವಿವಾದಾತ್ಮಕ ʼರೇಷನ್' ಹೇಳಿಕೆಯಿಂದ ಟ್ವಿಟ್ಟರ್ ನಲ್ಲಿ ʼಹಮಾರೆಅಬ್ಬಾಜಾನ್ʼ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್

ಹೊಸದಿಲ್ಲಿ: ಉತ್ತರ ಪ್ರದೇಶದ ಕುಶಿನಗರದಲ್ಲಿ ರವಿವಾರ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುವ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೀಡಾಗುವುದರ ಜತೆಗೆ ಟ್ವಿಟ್ಟರಿನಲ್ಲಿ #ಹಮಾರೆಅಬ್ಬಾಜಾನ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುವುದಕ್ಕೂ ಕಾರಣವಾಗಿದೆ. ತಮ್ಮ ಸರಕಾರ 2017ರಲ್ಲಿ ಅಸ್ತಿತ್ವಕ್ಕೆ ಬರುವ ಮೊದಲು ರಾಜ್ಯದಲ್ಲಿ "ಅಬ್ಬಾಜಾನ್" ಹೇಳುವವರೇ ರೇಷನ್ ಅರಗಿಸಿಕೊಳ್ಳುತ್ತಿದ್ದರು ಎಂಬ ಮತೀಯ ಹೇಳಿಕೆ ಮುಖ್ಯಮಂತ್ರಿಯೊಬ್ಬರು ನೀಡಿರುವುದು ಭಾರೀ ಚರ್ಚೆಗೆ ಕೂಡ ಗ್ರಾಸವಾಗಿದೆ.

ಸಾಮಾನ್ಯವಾಗಿ ಮುಸ್ಲಿಂ ಸಮುದಾಯದವರು ತಮ್ಮ ತಂದೆಯನ್ನು ಅಬ್ಬಾಜಾನ್ ಎಂದು ಹೇಳುವುದರಿಂದ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಮುಸ್ಲಿಮರನ್ನು ಗುರಿಯಾಗಿಸಿದೆ ಎಂದೇ ತಿಳಿಯಲಾಗಿದೆ.

ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್  ಟ್ವೀಟ್ ಮಾಡಿ ತಮ್ಮ ತಂದೆಯ ಫೋಟೋ ಶೇರ್ ಮಾಡಿದ್ದಾರೆ. "1941ರಲ್ಲಿ ನನ್ನ ತಂದೆ ಸೇನೆಗೆ ಸೇರಿದ ಸಮಯ. ನಾನು ಈ ಎತ್ತರಕ್ಕೆ ಏರಲು ಅವರೇ ಕಾರಣ. ನನ್ನ #ಅಬ್ಬಾಜಾನ್" ಎಂದು ಅವರು ಬರೆದಿದ್ದಾರೆ.

ಮೀಡಿಯಾಕಾರ್ಪ್‍ನ ಮುಖ್ಯ ಕಮರ್ಷಿಯಲ್ ಮತ್ತು ಡಿಜಿಟಲ್ ಅಧಿಕಾರಿ ಪರ್ಮೀಂದರ್ ಸಿಂಗ್ ಕೂಡ ತಮ್ಮ ತಂದೆಯ ಫೋಟೋ ಶೇರ್ ಮಾಡಿದ್ದಾರೆ.

ಪತ್ರಕರ್ತೆ ಸಬಾ ನಖ್ವಿ ತಮ್ಮ ತಂದೆ, ಖ್ಯಾತ ಪತ್ರಕರ್ತ ಸಯೀದ್ ನಖ್ವಿ  ಅವರ ಜತೆಗೆ ಉತ್ತರ ಪ್ರದೇಶದ ತಮ್ಮ ಪೂರ್ವಜರ ಮನೆಯಲ್ಲಿದ್ದಾಗ ತೆಗೆದ ಫೋಟೋ ಶೇರ್ ಮಾಡಿದ್ದಾರೆ.

ಲೇಖಕಿ ರಾಣಾ ಸಫ್ವಿ ತಮ್ಮ ತಂದೆಯ ಫೋಟೋ ಶೇರ್ ಮಾಡಿ "ಅವರು ನಮಗೆ ಸತ್ಯಸಂಧತೆ, ಪ್ರಾಮಾಣಿಕತೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯತೆಯನ್ನು ಕಲಿಸಿದ್ದಾರೆ" ಎಂದು ಬರೆದಿದ್ದಾರೆ.

ಪತ್ರಕರ್ತ ಆತಿಶ್ ತಾಸೀರ್ ಕೂಡ ತಮ್ಮ ತಂದೆ ಹಾಗೂ ತಾಯಿಯ ಫೋಟೋ ಶೇರ್ ಮಾಡಿ "ಅಬ್ಬಾ ಜಾನ್ ಔರ್ ಅಮ್ಮಿ, ಮೊಹಬ್ಬತ್ ಕಿ ಇಬ್ತಿದಾ ಮೈನ್" ಎಂದು ಬರೆದಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಅವರು ಟ್ವೀಟ್ ಮಾಡಿ "ಕೋಮುವಾದ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಹೊರತಾಗಿ ಚುನಾವಣೆ ಎದುರಿಸುವಾಗ ಬಿಜೆಪಿಗೆ ಬೇರೆ ಯಾವುದೇ ಅಜೆಂಡಾ ಇಲ್ಲ ಎಂದು ನಾನು ಹೇಳುತ್ತಾ ಬಂದಿದ್ದೇನೆ. ಹಿಂದುಗಳಿಗಾಗಿ ಮೀಸಲಾದ ಎಲ್ಲಾ ರೇಷನ್ ಅನ್ನು ತಿಂದು ಬಿಟ್ಟಿದ್ದಾರೆಂದು ಹೇಳುತ್ತಿರುವ ಮರು ಆಯ್ಕೆ ಬಯಸಿರುವ ಸೀಎಂ ಒಬ್ಬರು ಇಲ್ಲಿದ್ದಾರೆ" ಎಂದು ಬರೆದಿದ್ದಾರೆ, ಜತೆಗೆ ಯೋಗಿ ಆದಿತ್ಯನಾಥ್ ಅವರ ವಿವಾದಾತ್ಮಕ ಭಾಷಣದ ವೀಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ.


SHARE THIS

Author:

0 التعليقات: