Sunday, 5 September 2021

ಕಾನೂನಿಗಿಂತ ಯಾರೂ ಮೇಲಲ್ಲ: ತಂದೆಯ ವಿರುದ್ಧದ ಪ್ರಕರಣದ ಕುರಿತು ಛತ್ತೀಸ್‌ಗಡ ಮುಖ್ಯಮಂತ್ರಿ ಪ್ರತಿಕ್ರಿಯೆ


 ಕಾನೂನಿಗಿಂತ ಯಾರೂ ಮೇಲಲ್ಲ: ತಂದೆಯ ವಿರುದ್ಧದ ಪ್ರಕರಣದ ಕುರಿತು ಛತ್ತೀಸ್‌ಗಡ ಮುಖ್ಯಮಂತ್ರಿ ಪ್ರತಿಕ್ರಿಯೆ

ರಾಯ್‌ಪುರ: ಬ್ರಾಹ್ಮಣರನ್ನು ಬಹಿಷ್ಕರಿಸುವ ಕುರಿತು ಕರೆ ನೀಡಿದ್ದ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆಯ ವಿರುದ್ಧ ರಾಜ್ಯ ಪೊಲೀಸರು ಮೊದಲ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಬಘೇಲ್ ಅವರ ತಂದೆ ನಂದ್ ಕುಮಾರ್ ಬಘೇಲ್ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರನ್ನು ಬಹಿಷ್ಕರಿಸಬೇಕು ಎಂದು ಹೇಳಿಕೆ ನೀಡಿದ್ದರು.

"ಬ್ರಾಹ್ಮಣರನ್ನು ನಿಮ್ಮ ಗ್ರಾಮಗಳಿಗೆ ಪ್ರವೇಶಿಸಲು ಬಿಡಬೇಡಿ ಎಂದು  ಭಾರತದ ಎಲ್ಲ ಗ್ರಾಮಸ್ಥರನ್ನು ನಾನು ಒತ್ತಾಯಿಸುತ್ತೇನೆ.  ಅವರನ್ನು ಬಹಿಷ್ಕರಿಸಲು ನಾನು ಇತರ ಎಲ್ಲ ಸಮುದಾಯದವರೊಂದಿಗೆ ಮಾತನಾಡುತ್ತೇನೆ. ಅವರನ್ನು ವೋಲ್ಗಾ ನದಿಯ ದಡಕ್ಕೆ ವಾಪಸ್ ಕಳುಹಿಸಬೇಕು’’ ನಂದಕುಮಾರ್ ಬಘೇಲ್ ಹೇಳಿಕೆ ನೀಡಿದ್ದರು.

'ಸರ್ವ ಬ್ರಾಹ್ಮಣ ಸಮಾಜ' ನೀಡಿದ ದೂರಿನ ನಂತರ  ಡಿಡಿ ನಗರ ಪೊಲೀಸರು ಶನಿವಾರ ತಡರಾತ್ರಿ ನಂದ ಕುಮಾರ್ ಬಘೇಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಾಗೂ  505 (1) (ಬಿ) (ಎಚ್ಚರಿಕೆಯನ್ನು ನೀಡುವ ಉದ್ದೇಶ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಾನೂನು ಸರ್ವೋಚ್ಚ ಹಾಗೂ ನಮ್ಮ ಸರಕಾರವು ಎಲ್ಲರ ಪರವಾಗಿದೆ ಎಂದು ಒತ್ತಿ ಹೇಳಿದರು.

"ಅವರು ನನ್ನ 86 ವರ್ಷದ ತಂದೆಯಾಗಿದ್ದರೂ ಯಾರೂ ಕೂಡ ಕಾನೂನಿಗಿಂತ ಮೇಲಲ್ಲ. ಛತ್ತೀಸ್‌ಗಡ ಸರಕಾರವು ಪ್ರತಿಯೊಂದು ಧರ್ಮ, ಪಂಗಡ, ಸಮುದಾಯ ಮತ್ತು ಅವರ ಭಾವನೆಗಳನ್ನು ಗೌರವಿಸುತ್ತದೆ. ನನ್ನ ತಂದೆಯಾದ ನಂದ್ ಕುಮಾರ್ ಬಘೇಲ್ ಅವರ ನಿರ್ದಿಷ್ಟ ಸಮುದಾಯದ ವಿರುದ್ಧದ ಟೀಕೆ ಕೋಮು ಶಾಂತಿಗೆ ಭಂಗ ತಂದಿದೆ. ಅವರ ಹೇಳಿಕೆಯಿಂದ ನನಗೂ ದುಃಖವಾಗಿದೆ "ಎಂದು ಮುಖ್ಯಮಂತ್ರಿ ಬಘೇಲ್ ಹೇಳಿದರು.


SHARE THIS

Author:

0 التعليقات: