Friday, 24 September 2021

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆ: ವಸಂತ ಬಂಗೇರ ಆಕ್ರೋಶ

 ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆ: ವಸಂತ ಬಂಗೇರ ಆಕ್ರೋಶ

ಬೆಳ್ತಂಗಡಿ: ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಸರಕಾರದ ವಿರುದ್ಧ ಜನರ ಆಕ್ರೋಶ ವ್ಯಾಪಕವಾಗುತ್ತಿದೆ. ಜನರ ಬಗ್ಗೆ, ವಿರೋಧ ಪಕ್ಷಗಳ ಬಗ್ಗೆ ಸರಕಾರಕ್ಕೆ ಭಯ ಹುಟ್ಟಿದ್ದು, ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನಗಳನ್ನು ಕೆಡಹುವ ರಾಜ್ಯ ಸರಕಾರದ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಶುಕ್ರವಾರ ಬೆಳ್ತಂಗಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಜನಾಕ್ರೋಶಕ್ಕೆ ಹೆದರಿ ಪ್ರತಿಭಟನೆಗೆ ಮೈಕ್ ಪರವಾನಿಗೆ ನೀಡಲು ಸರಕಾರ ನಿರಾಕರಿಸುತ್ತಿದೆ ಎಂದ ಬಂಗೇರ, ಜನವಿರೋಧಿ ಸರಕಾರದ ವಿರುದ್ದ ಹೋರಾಟ ನಿರಂತರ ಮುಂದುವರಿಯಲಿದೆ ಎಂದರು.

ಬಿಜೆಪಿ ಹಿಂದೂ ರಕ್ಷಕರ ವೇಷ ಹಾಕಿಕೊಂಡಿರುವ ಹಿಂದೂ ಭಕ್ಷಕರ ಪಕ್ಷವಾಗಿದೆ. ದೇವಸ್ಥಾನಗಳನ್ನು ಧ್ವಂಸಗೊಳಿಸಿ ಇದೀಗ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ನಾಟಕ ಜನರಿಗೆ ಅರ್ಥವಾಗಿದೆ ಎಂದು ಬಂಗೇರ ನುಡಿದರು.

ಯಾವುದೇ ತಾಲೂಕಿನಲ್ಲಿ ಯಾವುದೇ ಒಂದು ದೇವಸ್ಥಾನವನ್ನು ಮುಟ್ಟಲು ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ. ಅದಕ್ಕಾಗಿ ಯಾವ ಹೋರಾಟಕ್ಕೂ ಪಕ್ಷ ಸಿದ್ಧವಿದೆ ಎಂದರು.

 ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ.ಗಂಗಾಧರ ಗೌಡ, ದೇವಸ್ಥಾನದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಜನಪರವಾದ ಯಾವುದೇ ಕಾರ್ಯಕ್ರಮ ಮಾಡದೆ ದೇವಸ್ಧಾನ ಕೆಡಹುವುದೇ ತಮ್ಮ ಕಾರ್ಯಕ್ರಮವಾಗಿಸಿಕೊಂಡಿದ್ದಾರೆ. ಸ್ವತಂತ್ರ ಭಾರತದಲ್ಲಿ ದೇವಸ್ಥಾನಗಳನ್ನು ಕಟ್ಟಿ ಅಭಿವೃದ್ಧಿಪಡಿಸಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ನಮ್ಮದು ಕಟ್ಟುವ ಸಂಸ್ಕೃತಿಯಾಗಿದೆ ಕೆಡಹುವುದು ಬಿಜೆಪಿ ಸಂಸ್ಕೃತಿಯಾಗಿದೆ ಎಂದರು.

ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಬ್ಲಾಕ್ ಅಧ್ಯಕ್ಷರುಗಳಾದ ರಂಜನ್ ಜಿ. ಗೌಡ, ಶೈಲೇಶ್ ಕುಮಾರ್ ವಹಿಸಿದ್ದರು.


ರಾರಾಜಿಸಿದ ಕೇಸರಿ ಶಾಲು, ಧ್ವಜಗಳು!

ಕಾಂಗ್ರೆಸ್ ದೇವಸ್ಥಾನಗಳ ಉಳಿವಿಗಾಗಿ ನಡೆಸಿದ ಪ್ರತಿಭಟನೆಯಲ್ಲಿ ಕೇಸರಿ ಶಾಲುಗಳು, ಕೇಸರಿ ಧ್ವಜಗಳು ರಾರಾಜಿಸಿದವು, ಪಕ್ಷದ ಧ್ವಜಗಳೊಂದಿಗೆ ಕೇಸರಿ ಧ್ವಜಗಳನ್ನು ಹಿಡಿದು ಪ್ರತಿಭಟನಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಲಾಯಿಲ ವೆಂಕಟ್ರಮಣ ದೇವಸ್ಥಾನದಿಂದ ಸಂತೆಕಟ್ಟೆಯ ಅಯ್ಯಪ್ಪಗುಡಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.


SHARE THIS

Author:

0 التعليقات: