Thursday, 2 September 2021

ಭಾರತೀಯ ಸೇನೆಯ ಯೋಧರೊಬ್ಬರನ್ನು ಥಳಿಸಿದ ಜಾರ್ಖಂಡ್ ಪೊಲೀಸರು: ವೀಡಿಯೊ ವೈರಲ್


 ಭಾರತೀಯ ಸೇನೆಯ ಯೋಧರೊಬ್ಬರನ್ನು ಥಳಿಸಿದ ಜಾರ್ಖಂಡ್ ಪೊಲೀಸರು: ವೀಡಿಯೊ ವೈರಲ್

ಹೊಸದಿಲ್ಲಿ: ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಭಾರತೀಯ ಸೇನೆಯ ಯೋಧರೊಬ್ಬರನ್ನು ಪೊಲೀಸರು ಅಮಾನವೀಯವಾಗಿ ಥಳಿಸಿರುವ ಘಟನೆ ಜಾರ್ಖಂಡ್ ರಾಜ್ಯದ ಚಾತ್ರಾ ಜಿಲ್ಲೆಯಲ್ಲಿ ನಡೆದಿದೆ.

ಮಾರುಕಟ್ಟೆ ಪ್ರದೇಶದಲ್ಲಿ ಯೋಧರೊಬ್ಬರಿಗೆ ಪೊಲೀಸರು ಕ್ರೂರವಾಗಿ ಒದೆಯುವ, ಹೊಡೆಯುವ, ಲಾಠಿ ಪ್ರಹಾರ ಮಾಡುವ ದೃಶ್ಯಾವಳಿಗಳು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಟನಾ ಸ್ಥಳದಲ್ಲಿದ್ದ ಇತರ ಇಬ್ಬರು ಅಧಿಕಾರಿಗಳ ಜೊತೆಗೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಚಾತ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರಂಜನ್ ತಿಳಿಸಿದ್ದಾರೆ.

ಚಾತ್ರಾ ಜಿಲ್ಲೆಯ ಮಯೂರ್ ಹಂದ್ ನ ಕರ್ಮಾ ಚೌಕದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಮೋಟಾರ್ ಬೈಕ್ ನಲ್ಲಿ ಬಂದಿದ್ದ ಯೋಧನನ್ನು ಮಾಸ್ಕ್ ತಪಾಸಣೆ ಅಭಿಯಾನ ನಡೆಸುತ್ತಿದ್ದ ಪೊಲೀಸರು ತಡೆದರು. ಮಾಸ್ಕ್ ಧರಿಸದೇ ಇರುವುದಕ್ಕೆ ಪ್ರಶ್ನಿಸಿದರು. ಆಗ ಯೋಧ-ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸ್ ಸಿಬ್ಬಂದಿ ತಕ್ಷಣವೇ ಬೈಕ್ ನ ಕೀಯವನ್ನು ಸೆಳೆದುಕೊಂಡ. ಬಳಿಕ ಯೋಧನಿಗೆ ಥಳಿಸಲಾಯಿತು. ಸ್ಥಳೀಯರು ಪೊಲೀಸರ ಕ್ರಮಕ್ಕೆ ಪ್ರತಿಭಟನೆ ನಡೆಸಿದ ಬಳಿಕ ಮಯೂರ್ ಹಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು.

ಥಳಿತಕ್ಕೊಳಗಾದ ಯೋಧನನ್ನು ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಕುಮಾರ್ ಜಾರ್ಖಂಡ್ ನ ಹಜಾರಿಬಾಗ್ ಮೂಲದವರಾಗಿದ್ದು, ಜೋಧ್ ಪುರದಲ್ಲಿ ಜಿಡಿಯಾಗಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾಸ್ಕ್ ಹಾಕದ್ದನ್ನು ನಮ್ಮ ಪೊಲೀಸರು ಪ್ರಶ್ನಿಸಿದಾಗ ಯೋಧನು ನಮ್ಮವರ ಮೇಲೆ ಹಲ್ಲೆ ಮಾಡಿದ್ದ. ಬಳಿಕ ನಮ್ಮ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ರಾಕೇಶ್ ರಂಜನ್ ಹೇಳಿದ್ದಾರೆ ಎಂದು  ಓಪಿ ಇಂಡಿಯಾ ಸುದ್ದಿಸಂಸ್ಥೆ ವರದಿ ಮಾಡಿದೆ.

ವೈರಲ್ ಆಗಿರುವ ವೀಡಿಯೊವನ್ನು ಪತ್ರಕರ್ತ ಮುಕೇಶ್ ರಂಜನ್ ಎನ್ನುವವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.


SHARE THIS

Author:

0 التعليقات: