Wednesday, 1 September 2021

ಒರಾಂಗ್ ರಾಷ್ಟ್ರೀಯ ಉದ್ಯಾನವನದಿಂದಲೂ ರಾಜೀವ್‌ ಗಾಂಧಿ ಹೆಸರು ತರವು


ಒರಾಂಗ್ ರಾಷ್ಟ್ರೀಯ ಉದ್ಯಾನವನದಿಂದಲೂ ರಾಜೀವ್‌ ಗಾಂಧಿ ಹೆಸರು ತರವು

ಗುವಾಹತಿ, ಸೆ.2: ಖೇಲ್ ರತ್ನ ಪ್ರಶಸ್ತಿಯಿಂದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಹೆಸರು ಬದಲಾಯಿಸಿದ ಬಳಿಕ ಇದೀಗ ಅಸ್ಸಾಂನ ರಾಷ್ಟ್ರೀಯ ಉದ್ಯಾನವನದಿಂದಲೂ ಮಾಜಿ ಪ್ರಧಾನಿಯ ಹೆಸರು ಕಿತ್ತುಹಾಕಲು ಅಸ್ಸಾಂ ಸರಕಾರ ಮುಂದಾಗಿದೆ.

ಒರಾಂಗ್‌ನಲ್ಲಿರುವ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ 'ಒರಾಂಗ್ ರಾಷ್ಟ್ರೀಯ ಉದ್ಯಾನವನ' ಎಂದು ಮರು ನಾಮಕರಣ ಮಾಡುವ ಕುರಿತು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಒರಾಂಗ್ ಪಾರ್ಕ್ ಇಡೀ ದೇಶದಲ್ಲೇ ಅತಿಹೆಚ್ಚು ರಾಯಲ್ ಬೆಂಗಾಲ್ ಹುಲಿಗಳ ಸಾಂಧ್ರತೆ ಹೊಂದಿರುವ ಉದ್ಯಾನವನ ಎಂಬ ಹೆಗ್ಗಳಿಕೆ ಹೊಂದಿದೆ.

ಉದ್ಯಾನವನದ ಹೆಸರು ಬದಲಾವಣೆ ಮಾಡುವಂತೆ ಹಲವು ಸಂಘಟನೆಗಳು ರಾಜ್ಯ ಸರಕಾರವನ್ನು ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ.

"ಹಲವು ಆದಿವಾಸಿ ಮತ್ತು ಚಹಾ ಬುಡಕಟ್ಟು ಸಮುದಾಯಗಳ ಬೇಡಿಕೆಯನ್ನು ಪರಿಗಣಿಸಿ, ಸಚಿವ ಸಂಪುಟ ರಾಜೀವ್‌ ಗಾಂಧಿ ನ್ಯಾಶನಲ್ ಪಾರ್ಕ್ ಹೆಸರನ್ನು ಒರಾಂಗ್ ನ್ಯಾಶನಲ್ ಪಾರ್ಕ್ ಎಂದು ಮರು ನಾಮಕರಣ ಮಾಡಲು ನಿರ್ಧರಿಸಿದೆ" ಎಂದು ಅಧಿಕೃತ ಪ್ರಕಟನೆ ಹೇಳಿದೆ.

ಈ ಉದ್ಯಾನವನ ಬ್ರಹ್ಮಪುತ್ರಾ ಉತ್ತರ ದಂಡೆಯ ದರ್ರಾಂಗ್, ಉದಲಗುರಿ ಮತ್ತು ಶೋಣಿತಾಪುರ ಜಿಲ್ಲೆಗಳಲ್ಲಿ ಹರಡಿದ್ದು, ಭಾರತದ ಘೇಂಡಾಮೃಗ, ರಾಯಲ್ ಬೆಂಗಾಲ್ ಹುಲಿ, ಪಿಗ್ಮಿ ಹಂದಿ, ಆನೆ ಮತ್ತು ವನ್ಯ ನೀರೆಮ್ಮೆಗಳಿಗೆ ಹೆಸರುವಾಸಿ.

79.28 ಚದರ ಕಿಲೋಮೀಟರ್ ವಿಸ್ತೀರ್ಣದ ಈ ಉದ್ಯಾನವನವನ್ನು 1985ರಲ್ಲಿ ವನ್ಯಧಾಮ ಎಂದು ಘೋಷಿಸಲಾಗಿತ್ತು. ಬಳಿಕ 1999ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಈ ಪಾರ್ಕ್‌ಗೆ 1992ರಲ್ಲಿ ರಾಜೀವ್‌ ಗಾಂಧಿಯವರ ಹೆಸರು ಇಡಲಾಗಿತ್ತು.


 SHARE THIS

Author:

0 التعليقات: