Tuesday, 21 September 2021

ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ವಿ.ಆರ್. ಚೌಧರಿ ನೇಮಕ

 

ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ವಿ.ಆರ್. ಚೌಧರಿ ನೇಮಕ

ನವದೆಹಲಿ, ಸೆಪ್ಟೆಂಬರ್ 21: ನುರಿತ ಹಾಗೂ ಅನುಭವಿ ಪೈಲಟ್ ಏರ್​ ಮಾರ್ಷಲ್ ವಿವೇಕ್ ರಾಮ್ ಚೌಧರಿಯವರನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥರ ಹುದ್ದೆಗೆ ನೇಮಿಸಲು ಭಾರತ ಸರ್ಕಾರ ನಿರ್ಧರಿಸಿದೆ.

ವಾಯುಪಡೆಯ ಹಾಲಿ ಮುಖ್ಯಸ್ಥರಾದ ಏರ್​ಚೀಫ್ ಮಾರ್ಷಲ್ ಆರ್​.ಕೆ.ಎಸ್. ಬಧೌರಿಯಾ ಇದೇ ಸೆಪ್ಟೆಂಬರ್ 30ರಂದು ನಿವೃತ್ತರಾಗಲಿದ್ದು, ಅವರ ನಂತರ ವಾಯುಪಡೆ ಮುಖ್ಯಸ್ಥರ ಹುದ್ದೆಯನ್ನು ವಿ.ಆರ್. ಚೌಧರಿ ನಿರ್ವಹಿಸಲಿದ್ದಾರೆ.

ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್. ಚೌಧರಿ, ಮಿಗ್​- 29 ಯುದ್ಧ ವಿಮಾನದ ನಿಪುಣ ಪೈಲಟ್ ಎಂದೇ ಹೆಸರಾಗಿದ್ದಾರೆ. ಆಗಸ್ಟ್ 1, 2020ರಿಂದಲೂ ಚೌಧರಿ ಪಶ್ಚಿಮ ಏರ್​ ಕಮಾಂಡ್​ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಸೆಂಬರ್ 29, 1982ರಂದು ಫೈಟರ್ ಪೈಲಟ್ ಆಗಿ ನಿಯೋಜಿತರಾದ ಚೌಧರಿ, 39 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ 3800 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.

ಭಾರತ ಸರ್ಕಾರದ ರಕ್ಷಣಾ ಇಲಾಖೆಯ ವಕ್ತಾರರು, ಏರ್​ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರ ಪದೋನ್ನತಿಯನ್ನು ದೃಢಪಡಿಸಿದ್ದಾರೆ. "ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿರುವ ಏರ್​ ಮಾರ್ಷಲ್ ವಿ.ಆರ್. ಚೌಧರಿಯವರನ್ನು ವಾಯುಪಡೆಯ ಮುಖ್ಯಸ್ಥರಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ. ಆರ್​.ಕೆ.ಎಸ್. ಬಧೌರಿಯಾ ಸೆ.30ರಂದು ನಿವೃತ್ತರಾಗಲಿದ್ದಾರೆ,'' ಎಂದು ತಿಳಿಸಿದ್ದಾರೆ.SHARE THIS

Author:

0 التعليقات: