Sunday, 12 September 2021

ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ


 ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ

ಅಹಮದಾಬಾದ್:  ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರ ಸಭೆಯ ನಂತರ ಗುಜರಾತ್ ಮುಖ್ಯಮಂತ್ರಿಯಾಗಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ  ತೆರೆ ಬಿದ್ದಿದೆ. ಶನಿವಾರ ರಾಜೀನಾಮೆ ನೀಡಿರುವ ವಿಜಯ್ ರೂಪಾನಿಯವರ ಉತ್ತರಾಧಿಕಾರಿಯಾಗಿ ಶಾಸಕ ಭೂಪೇಂದ್ರ ಪಟೇಲ್  ರವಿವಾರ ಆಯ್ಕೆಯಾಗಿದ್ದಾರೆ.

ಹಿರಿಯ ಬಿಜೆಪಿ ನಾಯಕ ಭೂಪೇಂದ್ರ ಪಟೇಲ್  ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಆಪ್ತರಾಗಿದ್ದಾರೆ.  ಇಂದು ಕಮಲಂನಲ್ಲಿ ರಾಜ್ಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರ ಹೆಸರನ್ನು ಸರ್ವಾನುಮತದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮಗೊಳಿಸಲಾಯಿತು. 

ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಈ ಹಿಂದೆ ಪ್ರತಿನಿಧಿಸುತ್ತಿದ್ದ ಅಹಮದಾಬಾದಿನ ಘಾಟ್ಲೋಡಿಯಾ ಕ್ಷೇತ್ರದ ಶಾಸಕರಾಗಿರುವ ಪಟೇಲ್ ಈ ಹಿಂದೆ ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ (ಎಯುಡಿಎ) ಅಧ್ಯಕ್ಷರಾಗಿದ್ದರು. ಅವರು ಅಮದವಾಡ ಮುನ್ಸಿಪಲ್ ಕಾರ್ಪೊರೇಶನ್ (ಎಎಂಸಿ) ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮಧ್ಯಾಹ್ನ 3 ಗಂಟೆಗೆ ಕೇಂದ್ರ ವೀಕ್ಷಕರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಜೋಶಿ ಹಾಗೂ  ಪಕ್ಷದ ಪ್ರಧಾನ ಕಾರ್ಯದರ್ಶಿ ತರುಣ್ ಚೌಗ್ ಅವರ ಸಮ್ಮುಖದಲ್ಲಿ ನಡೆದಿದೆ. ಸಭೆಯಲ್ಲಿ ರಾಜ್ಯದ ಹೊಸ ಮುಖ್ಯಮಂತ್ರಿಯನ್ನು ನಿರ್ಧರಿಸಲಾಯಿತು. ಹೊಸ ನಾಯಕ ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ’’ ಎಂದು ಗುಜರಾತ್ ಬಿಜೆಪಿ ವಕ್ತಾರ ಯಮಲ್ ವ್ಯಾಸ್ ಹೇಳಿದ್ದಾರೆ.

ಬಿಜೆಪಿಯ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ನಂತರ ಶನಿವಾರ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರು.

ಗುಜರಾತ್‌ನಲ್ಲಿ ರೂಪಾನಿಯವರನ್ನು 2016 ರಲ್ಲಿ ಮುಖ್ಯಮಂತ್ರಿಯಾಗಿ  ನೇಮಿಸಲಾಗಿತ್ತು. 2017ರ ವಿಧಾನಸಭಾ ಚುನಾವಣೆಗೆ 16 ತಿಂಗಳು ಮುಂಚಿತವಾಗಿ  ಆನಂದಿಬೆನ್ ಪಟೇಲ್ ಅವರನ್ನು ಕೆಳಗಿಳಿಸಿ ರೂಪಾನಿಯವರನ್ನು ಸಿಎಂ ಮಾಡಲಾಗಿತ್ತು. ಇದೀಗ ಗುಜರಾತ್ ವಿಧಾನಸಭಾ ಚುನಾವಣೆಗೆ 15 ತಿಂಗಳು ಬಾಕಿ ಇರುವಾಗ ರೂಪಾನಿಯವರನ್ನು ಕೆಳಗಿಳಿಸಿ ಪಟೇಲ್ ಸಮುದಾಯದ ಭೂಪೇಂದ್ರ ಪಟೇಲ್ ರನ್ನು ಸಿಎಂ ಆಗಿ ನೇಮಿಸಲಾಗಿದೆ.


SHARE THIS

Author:

0 التعليقات: