ಮುಂದಿನ ಬಾರಿಯೂ ಸಿದ್ದರಾಮಯ್ಯರನ್ನು ವಿರೋಧ ಪಕ್ಷದಲ್ಲಿಯೇ ಕೂರಿಸುತ್ತೇನೆ : ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೆಲುವು ಸಾಧಿಸಿದರೂ, ಅವರನ್ನು ವಿರೋಧ ಪಕ್ಷದಲ್ಲಿಯೇ ಕೂರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಇದೇ ಮೊದಲ ಬಾರಿಗೆ ವಿಧಾನಮಂಡಲದ ಅಧಿವೇಶನಕ್ಕೆ ಬರುತ್ತಿದ್ದೇನೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದು, ಅವರಿಗೆ ನನ್ನಿಂದ ಅಗತ್ಯವಾದ ಸಹಕಾರವನ್ನು ನೀಡುತ್ತೇನೆ ಎಂದರು.
ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಪಕ್ಷವನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರೊಂದಿಗೆ ಸೇರಿ ರಾಜ್ಯ ಪ್ರವಾಸದ ಮೂಲಕ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ಸಿಎಂ ಬೊಮ್ಮಾಯಿ ಭೇಟಿ: ವಿಧಾನಸೌಧದ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಅಲ್ಲದೆ, ಇದೇ ವೇಳೆ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.
0 التعليقات: