Wednesday, 8 September 2021

ಮಹಾರಾಷ್ಟ್ರ ಮೂಲದ ನಕಲಿ ಐಎಎಸ್ ಅಧಿಕಾರಿಯ ಬಂಧನ

 

ಮಹಾರಾಷ್ಟ್ರ ಮೂಲದ ನಕಲಿ ಐಎಎಸ್ ಅಧಿಕಾರಿಯ ಬಂಧನ

ರಾಮನಗರ, ಸೆಪ್ಟೆಂಬರ್ 9: ತಾನು ಐಎಎಸ್ ಅಧಿಕಾರಿ ಎಂದು ನಂಬಿಸಿ ಜನರಿಗೆ ಮೋಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ನಕಲಿ ಐಎಎಸ್ ಅಧಿಕಾರಿಯನ್ನು ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲುಹುಣಸೆಯ ಅಪಾರ್ಟ್‌ಮೆಂರ್ಟ್‌ನಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ತಾನು ಐಎಎಸ್ ಅಧಿಕಾರಿ, ಕೇಂದ್ರ ಸರ್ಕಾರದ ಗೃಹ ಸಚಿವಾಲಯ(Ministry of Home Affairs)ದಲ್ಲಿ ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದನೆಂದು ನಕಲಿ ಅಧಿಕಾರಿಯ ಬಂಡವಾಳ ಬಯಲಾಗಿದೆ.

ಮಹಾರಾಷ್ಟ್ರ ಮೂಲದ ಶಶಿರ್(24) ಬಂಧಿತ ನಕಲಿ ಐಎಎಸ್ ಅಧಿಕಾರಿಯಾಗಿದ್ದು, ಆರೋಪಿ ಶಶಿರ್ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ತಿರುಗಾಡುತ್ತಾ ಜನರಿಗೆ ತಾನು ಐಎಎಸ್ ಅಧಿಕಾರಿ ಎಂದು ನಂಬಿಸಿ ಸಿವಿಲ್ ವ್ಯಾಜ್ಯಗಳಲ್ಲಿ ಭಾಗಿಯಾಗಿ ಜನರಿಗೆ ಮೋಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ನಕಲಿ ಅಧಿಕಾರಿಯ ಬಂಡವಾಳ ಬಯಲು ಮಾಡಿ ಬಂಧಿಸಿರುವ ಕಗ್ಗಲೀಪುರ ಪೋಲಿಸರು, ಆರೋಪಿ ಶಶಿರ್ ಬಳಸುತ್ತಿದ್ದ ಮೊಬೈಲ್‌ಗಳು, ಐಡಿ ಕಾರ್ಡ್ ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.

ಜಮೀನು ವಿವಾದಗಳೇ ಆರೋಪಿಯ ಟಾರ್ಗೆಟ್

ರಾಜಧಾನಿ ಬೆಂಗಳೂರಿನ ಸೆರಗಿನಲ್ಲಿರುವ ಕಗ್ಗಲೀಪುರ ರಾಮನಗರ ಜಿಲ್ಲೆಯ ಪೋಲಿಸ್ ವ್ಯಾಪ್ತಿಗೆ ಬಂದರೂ, ಬೆಂಗಳೂರು ಮಹಾನಗರದ ಅಂಗವಾಗಿದೆ. ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಹಾಗಾಗಿ ತುಂಡು ಭೂಮಿಗೆ ವಿವಾದ ಅಂಟಿಕೊಂಡಿರುತ್ತವೆ. ಅದೇ ವಿವಾದಗಳೇ ಆರೋಪಿಯಾಗಿರುವ ನಕಲಿ ಐಎಎಸ್ ಅಧಿಕಾರಿ ಶಶಿರ್ ಹಣ ಮಾಡಲು ರಹದಾರಿಯಾಗಿದೆ.

ಮಹಾರಾಷ್ಟ್ರ ಮೂಲದ ಶಶಿರ್ ಕಳೆದ ಮೂರು ವರ್ಷಗಳಿಂದ ಕಗ್ಗಲೀಪುರದಲ್ಲಿ ವಾಸ ಮಾಡುತ್ತಿದ್ದು, ಆರೋಪಿ ಕೇವಲ ಡಿಪ್ಲೋಮಾ ವ್ಯಾಸಂಗ ಮಾಡಿರುವ ಚಾಲಾಕಿಯಾಗಿದ್ದಾನೆ. ಆದರೆ ಜನರಿಗೆ ತಾನು ತಾನು ಐಎಎಸ್ ಅಧಿಕಾರಿ ಎಂದು ನಂಬಿಸಿ ಜಮೀನು ವಿವಾದಗಳನ್ನು ಬಗೆಹರಿಸಿಕೊಡುತ್ತೇನೆ ಎಂದು ಜನರನ್ನು ತನ್ನ ಮೋಸದ ಬಲೆಯಲ್ಲಿ ಕೆಡವಿಕೊಳ್ಳುತ್ತಿದ್ದ.

ರವಿಶಂಕರ್ ಗುರೂಜಿಗೂ ನಂಬಿಸಿದ್ದ ಶಶಿರ್

ಬಂಧಿತ ಆರೋಪಿ ಕೇವಲ ಜನರನ್ನಷ್ಟೇ ಅಲ್ಲದೇ ಖ್ಯಾತ ಸ್ವಾಮೀಜಿ ರವಿಶಂಕರ್ ಗುರೂಜಿಯವರನ್ನು ತಾನು ಐಎಎಸ್ ಅಧಿಕಾರಿ ಎಂದು ನಂಬಿಸಿದ್ದ. ಅಲ್ಲದೇ ರವಿಶಂಕರ್ ಗುರೂಜಿ ಆಶ್ರಮಕ್ಕೂ ಭೇಟಿ ಕೊಟ್ಟು ಐಎಎಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ಶಶಿರ್ ರವಿಶಂಕರ್ ಗುರೂಜಿ ಆಶ್ರಮದ ಜಮೀನು ವಿವಾದ ವಿಚಾರದಲ್ಲಿ ಗುರೂಜಿ ಪರ ಬ್ಯಾಟಿಂಗ್ ಮಾಡಿದ್ದ.

ಜಮೀನು ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಲ್ಲೂ ತಾನು ಐಎಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಶಶಿರ್ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಯ ಅಸಲಿಯತ್ತು ಬಯಲಾಗಿದೆ.
SHARE THIS

Author:

0 التعليقات: