Wednesday, 29 September 2021

ಮಮತಾ ಬ್ಯಾನರ್ಜಿಗೆ ನಿರ್ಣಾಯಕ ದಿನ: ಭವಾನಿಪುರದಲ್ಲಿ ಮತದಾನ ಆರಂಭ


ಮಮತಾ ಬ್ಯಾನರ್ಜಿಗೆ ನಿರ್ಣಾಯಕ ದಿನ: ಭವಾನಿಪುರದಲ್ಲಿ ಮತದಾನ ಆರಂಭ

ಕೊಲ್ಕತ್ತಾ: ದಕ್ಷಿಣ ಕೊಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರದ ಮೂರು ಲಕ್ಷಕ್ಕೂ ಅಧಿಕ ಮತದಾರರು ಇಂದು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ರಾಜಕೀಯ ಭವಿಷ್ಯ ಬರೆಯಲಿದ್ದು, ಮುಂಜಾನೆ 7ಕ್ಕೆ ಮತದಾನ ಆರಂಭವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸಿ ಸುವೇಂದು ಅಧಿಕಾರಿ ಎದುರು ಸೋತಿದ್ದ ಮಮತಾ, ಮುಖ್ಯಮಂತ್ರಿಯಾಗಿ ಆರು ತಿಂಗಳ ಒಳಗಾಗಿ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಇದರಿಂದಾಗಿ ಈ ಚುನಾವಣೆಯ ಫಲಿತಾಂಶ ಅವರಿಗೆ ನಿರ್ಣಾಯಕವಾಗಲಿದೆ. ಅಕ್ಟೋಬರ್ 3ರಂದು ಮತಗಳ ಎಣಿಕೆ ನಡೆಯಲಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಸುಬ್ರತಾ ಬಕ್ಷಿ ಅವರು, ಶಾಸಕತ್ವಕ್ಕೆ ರಾಜೀನಾಮೆ ನೀಡಿ ನಾಯಕಿಯ ಆಯ್ಕೆಗೆ ಸ್ಥಾನ ತೆರವುಗೊಳಿಸಿದ್ದರು.

"ಮುಖ್ಯಮಂತ್ರಿಯಾಗಿ ಮುಂದುವರಿಯಲು ಗೆಲುವು ಅಗತ್ಯವಾಗಿದೆ. ಸಿಎಎ, ಎನ್‌ಆರ್‌ಸಿ, ನೋಟು ಅಪಮೌಲ್ಯ ಹಾಗೂ ಬಿಜೆಪಿ ಜನವಿರೋಧಿ ನೀತಿಗಳ ವಿರುದ್ಧದ ಹೋರಾಟಕ್ಕೆ ಇದೊಂದೇ ನನಗಿರುವ ಮಾರ್ಗ" ಎಂದು ಮಮತಾ ಹೇಳಿದ್ದಾರೆ.

ಮಮತಾ ಬ್ಯಾನರ್ಜಿಯವರ ನಿವಾಸ ಇರುವ ಕಾಲಿಘಾಟ್ ಕೂಡಾ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, 2011 ಮತ್ತು 2016ರಲ್ಲಿ ಇಲ್ಲಿಂದ ಗೆಲುವು ಸಾಧಿಸಿದ್ದರೂ ಈ ಬಾರಿ ಗೆಲುವು ಸುಲಭವಲ್ಲ. ಬಿಜೆಪಿ ಹೈಕೋರ್ಟ್ ವಕೀಲೆ, 41 ವರ್ಷ ವಯಸ್ಸಿನ ಪ್ರಿಯಾಂಕಾ ತಿಬ್ರೇವಾಲ್ ಅವರನ್ನು ಮಮತಾ ವಿರುದ್ಧ ಕಣಕ್ಕಿಳಿಸಿದೆ. ಸಿಪಿಎಂ ಮತ್ತೊಬ್ಬರು ವಕೀಲರಾದ ಶ್ರೀಜೀಬ್ ಬಿಸ್ವಾಸ್ ಅವರನ್ನು ಸ್ಪರ್ಧೆಗೆ ಇಳಿಸಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಮತಗಟ್ಟೆಗಳ 200 ಮೀಟರ್ ಸುತ್ತಲೂ ಕಳೆದ ಮಂಗಳವಾರದಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರೀಯ ಅರೆಮಿಲಿಟರಿ ಪಡೆಗಳ 35 ತುಕಡಿಗಳನ್ನು ನಿಯೋಜಿಸಲಾಗಿದ್ದು, 270 ಮತಗಟ್ಟೆಗಳಿಗೆ ತಲಾ ಮೂವರಂತೆ ಅರೆಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಮತಾ ಬ್ಯಾನರ್ಜಿ ಮತ ಚಲಾಯಿಸುವ ಮಿತ್ರಾ ಇನ್‌ಸ್ಟಿಟ್ಯೂಷನ್ ಮತಗಟ್ಟೆ ಸೇರಿದಂತೆ 13 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಪರಿಗಣಿಸಲಾಗಿದೆ.SHARE THIS

Author:

0 التعليقات: