Wednesday, 8 September 2021

ರವಿಶಂಕರ್ ಗುರೂಜಿಗೆ ವಂಚನೆ ಆರೋಪ: ನಕಲಿ ಐಎಎಸ್ ಅಧಿಕಾರಿ ಬಂಧನ


 ರವಿಶಂಕರ್ ಗುರೂಜಿಗೆ ವಂಚನೆ ಆರೋಪ: ನಕಲಿ ಐಎಎಸ್ ಅಧಿಕಾರಿ ಬಂಧನ

ಬೆಂಗಳೂರು: ವಿಶೇಷ ಐಎಎಸ್ ಅಧಿಕಾರಿ ಎಂದು ನಂಬಿಸಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಆಶ್ರಮ ಸೇರಿದಂತೆ ಹಲವರಿಗೆ ವಂಚಿಸುತ್ತಿದ್ದ ಆರೋಪ ಸಂಬಂಧ ನಕಲಿ ಐಎಎಸ್ ಅಧಿಕಾರಿಯನ್ನು ಕಗ್ಗಲೀಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಇಲ್ಲಿನ ದಕ್ಷಿಣ ತಾಲೂಕಿನ ಸಾಲುಹುಣಸೆ ಪ್ರದೇಶದ ನಿವಾಸಿ ಶಿಶಿರ್ ಬಾಳಾಸಾಹೇಬ್(24) ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಮಹಾರಾಷ್ಟ್ರದ ಜಲಗಾಂವ್ ಜಿಲ್ಲಾ ಮೂಲದ ಆರೋಪಿಯು ಡಿಪ್ಲೊಮಾ ಪದವೀಧರನಾಗಿದ್ದು ನಗರದಲ್ಲಿ ನೆಲೆಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ನಿರುದ್ಯೋಗಿಯಾಗಿದ್ದ ಶಿಶಿರ್ ತಾನು ಕೇಂದ್ರ ಗೃಹ ಇಲಾಖೆಯಲ್ಲಿ ಐಎಎಸ್ ಅಧಿಕಾರಿಯಾಗಿದ್ದು, ದಕ್ಷಿಣ ವಲಯದ ವಿಶೇಷ ಕರ್ತವ್ಯ ಅಧಿಕಾರಿ (ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ) ಎಂದು ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ಹಣ ವಸೂಲಿಗೆ ಅಸ್ತ್ರವನ್ನಾಗಿ ಮಾಡಿಕೊಂಡಿದ್ದನು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಆರೋಪಿ ಉದಿಪಾಳ್ಯದಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದವರಿಗೂ ತಾನು ಐಎಎಸ್ ಅಧಿಕಾರಿಯಾಗಿದ್ದು, ಆಶ್ರಮಕ್ಕೆ ಸೇರಿದ ಸಿವಿಲ್ ವ್ಯಾಜ್ಯಗಳನ್ನು ಪರಿಹರಿಸಿ ಕೊಡುವುದಾಗಿ ನಂಬಿಸಿ ಹಣ ಸಹ ಪಡೆದಿದ್ದ ಎಂದು ಆರೋಪಿಸಲಾಗಿದೆ. ಸ್ಥಳೀಯ ಪೊಲೀಸರ ಬಳಿಯೂ ತಾನು ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದು ಅನುಮಾನದ ಮೇಲೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತನಿಂದ ಕಾರು, ನಕಲಿ ಗುರುತಿನ ಚೀಟಿ ಹಾಗೂ ಮೊಬೈಲ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 170, 171, 182, 186, 419, 420 ಅಡಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 


SHARE THIS

Author:

0 التعليقات: