ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ಅಡಿಯಲ್ಲಿ ತರಲು ಇದು ಸಕಾಲವಲ್ಲ:ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ: ಕೋವಿಡ್ -19 ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಮೇಲಿನ ರಿಯಾಯಿತಿ ದರಗಳನ್ನು ಡಿಸೆಂಬರ್ 31, 2021ರವರೆಗೆ ವಿಸ್ತರಿಸಲು ಜಿಎಸ್ಟಿ ಕೌನ್ಸಿಲ್ ನಿರ್ಧರಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಘೋಷಿಸಿದರು. ಈ ಹಿಂದೆ ಸೆಪ್ಟೆಂಬರ್ 30 ತನಕ ರಿಯಾಯಿತಿ ದರಗಳನ್ನು ಘೋಷಿಸಲಾಗಿತ್ತು.
" ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ಅಡಿಯಲ್ಲಿ ತರಲು ಇದು ಸಕಾಲವಲ್ಲ ಎಂದು ಕೌನ್ಸಿಲ್ ಭಾವಿಸಿದೆ'' ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇರಳ ಹೈಕೋರ್ಟ್ ಆದೇಶದ ನಂತರ ಸರಕು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತೆರಿಗೆ ಚೌಕಟ್ಟಿನ ಅಡಿಯಲ್ಲಿ ಸೇರಿಸುವ ಕುರಿತು ಚರ್ಚಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.
"ನ್ಯಾಯಾಲಯದ ನಿರ್ದೇಶನದ ಮೇರೆಗೆ ಅದನ್ನು ಮಂಡಿಸಲಾಯಿತು. ಆದರೆ ಸದಸ್ಯರು ಜಿಎಸ್ಟಿಯಲ್ಲಿ ಪೆಟ್ರೋಲ್-ಡೀಸೆಲ್ ಅನ್ನು ಸೇರಿಸುವುದನ್ನು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು" ಎಂದು ಸೀತಾರಾಮನ್ ಹೇಳಿದರು.
"ಇದನ್ನು ಹೈಕೋರ್ಟ್ಗೆ ವರದಿ ಮಾಡಲಾಗುವುದು. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ಅಡಿಯಲ್ಲಿ ತರುವ ಸಮಯ ಪಕ್ವವಾಗಿಲ್ಲ ಎಂದು ಜಿಎಸ್ಟಿ ಕೌನ್ಸಿಲ್ ಭಾವಿಸಿದೆ" ಎಂದು ಅವರು ಹೇಳಿದರು.
ಜೂನ್ ನಲ್ಲಿ ಕೇರಳ ಹೈಕೋರ್ಟ್, ಒಂದು ರಿಟ್ ಅರ್ಜಿಯನ್ನು ಆಧರಿಸಿ ಜಿಎಸ್ ಟಿ ವ್ಯಾಪ್ತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ತರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಜಿಎಸ್ ಟಿ ಕೌನ್ಸಿಲ್ ಗೆ ಆದೇಶಿಸಿತ್ತು.
ಡೀಸೆಲ್ನೊಂದಿಗೆ ಬೆರೆಸುವ ಜೈವಿಕ ಡೀಸೆಲ್ ಮೇಲಿನ ಜಿಎಸ್ಟಿ ದರವನ್ನು (ತೈಲ ಮಾರುಕಟ್ಟೆ ಕಂಪನಿಗಳು ಬಳಸುವ) 12 ಶೇ. ರಿಂದ 5 ಶೇ. ಕ್ಕೆ ಇಳಿಸಲಾಗಿದೆ ಎಂದು ಸಚಿವರು ಘೋಷಿಸಿದರು.
0 التعليقات: