Wednesday, 8 September 2021

'ಐಡಿ ಫ್ರೆಶ್' ಉತ್ಪನ್ನಗಳಿಗೆ ಮತೀಯ ಬಣ್ಣ ಹಚ್ಚಲು ಯತ್ನ; ಆರೋಪಗಳು ಸುಳ್ಳು, ಆಧಾರ ರಹಿತ ಎಂದ ಕಂಪೆನಿ


 'ಐಡಿ ಫ್ರೆಶ್' ಉತ್ಪನ್ನಗಳಿಗೆ ಮತೀಯ ಬಣ್ಣ ಹಚ್ಚಲು ಯತ್ನ; ಆರೋಪಗಳು ಸುಳ್ಳು, ಆಧಾರ ರಹಿತ ಎಂದ ಕಂಪೆನಿ

ಹೊಸದಿಲ್ಲಿ: ಮತೀಯ ಬಣ್ಣ ಹೊಂದಿದ ವಾಟ್ಸ್ಯಾಪ್ ಫಾರ್ವರ್ಡ್ ಸಂದೇಶವೊಂದರ ಮೂಲಕ ಖ್ಯಾತ ಆಹಾರ ತಯಾರಿಕಾ ಸಂಸ್ಥೆ ಐಡಿ ಫ್ರೆಶ್ ಕುರಿತು ತಪ್ಪು ಅಭಿಪ್ರಾಯ ಮೂಡಿಸುವ ಯತ್ನವೊಂದು ನಡೆದಿದೆ. ತನ್ನ ಇಡ್ಲಿ, ದೋಸೆ ಹಿಟ್ಟನ್ನು ಹದವಾಗಿಸಲು ಕಂಪೆನಿಯ ದನಗಳ ಎಲುಬು ಹಾಗೂ ಕರುಗಳ ರೆನ್ನೆಟ್ ಬಳಸುತ್ತಿದೆ ಎಂಬ ವಾಟ್ಸ್ಯಾಪ್ ಸಂದೇಶವೊಂದು ಹರಿದಾಡಿದೆ.

ಈ ಕುರಿತು ಕಂಪೆನಿ ಸ್ಪಷ್ಟೀಕರಣ ನೀಡಿದೆಯಲ್ಲದೆ  ಈ ವಾಟ್ಸ್ಯಾಪ್ ಸಂದೇಶ ತಪ್ಪುದಾರಿಗೆಳೆಯುವಂತಹುದ್ದು, ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದೆ. ತನ್ನ ಉತ್ಪನ್ನಗಳಿಗೆ ಕೇವಲ ಸಸ್ಯಾಹಾರಿ ವಸ್ತುಗಳನ್ನು ಮಾತ್ರ ಬಳಸುತ್ತಿರುವುದಾಗಿಯೂ ಕಂಪೆನಿ ಹೇಳಿದೆ.

ಕಂಪೆನಿಯ ವಿರುದ್ಧದ ವಾಟ್ಸ್ಯಾಪ್ ಸಂದೇಶ ಈಗಾಗಲೇ ವೈರಲ್ ಆಗಿದ್ದು ಕಂಪೆನಿಯು ಕೇವಲ ಮುಸ್ಲಿಮರಿಗೆ ಮಾತ್ರ ಉದ್ಯೋಗ ನೀಡುತ್ತಿದೆ ಹಾಗೂ ಹಲಾಲ್ ಪ್ರಮಾಣೀಕೃತ ಕಂಪೆನಿಯಾಗಿದೆ ಎಂದೂ ಹೇಳಿಕೊಂಡಿದೆ. ಈ ಆರೋಪಗಳಿಗೆ ಒಂದೇ ಕಾರಣವೆಂದರೆ ಈ ಕಂಪೆನಿಯನ್ನು ಸ್ಥಾಪಿಸಿದವರು ಪಿ ಸಿ ಮುಸ್ತಾಫ ಮತ್ತವರ ನಾಲ್ಕು ಮಂದಿ ಸೋದರ ಸಂಬಂಧಿಗಳಾದ ಅಬ್ದುಲ್ ನಾಸೆರ್, ಶಂಶುದ್ದೀನ್ ಟಿ ಕೆ, ಜಾಫರ್ ಟಿಕೆ ಹಾಗೂ ನೌಷಾದ್ ಟಿಎ ಎಂಬವರಾಗಿರುವುದಾಗಿದೆ ಎಂದು newsminute.com ವರದಿ ತಿಳಿಸಿದೆ. ಕಂಪೆನಿಯು 2014ರಲ್ಲಿ  ಹೂಡಿಕೆಗಾಗಿ  ಘೋಷಣೆ ಹೊರಡಿಸಿದ ಸಂದರ್ಭ ಹಾಗೂ ರೂ 35 ಕೋಟಿ ಹೂಡಿಕೆ ಪಡೆದ ಸಂದರ್ಭ ತಾನು "ಶರೀಯ ಇಸ್ಲಾಮಿಕ್ ಕಾನೂನುಗಳಿಗೆ" ಕಟ್ಟುನಿಟ್ಟಾಗಿ ಬದ್ಧವಾದ ಮೊದಲ ವಿ-ಸಿ ಡೀಲ್ ಎಂದು ಹೇಳಿಕೊಂಡಿತ್ತೆಂದೂ ಸಂದೇಶದಲ್ಲಿ ಹೇಳಲಾಗಿದೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಕಂಪೆನಿಯು ತಾನು ತನ್ನ ಇಡ್ಲಿ ದೋಸಾ  ಹಿಟ್ಟನ್ನು ಅಕ್ಕಿ, ಉದ್ದಿನ ಬೇಳೆ, ಮೆಂತೆ ಕಾಳು ಮತ್ತು ಆರ್ ಒ ನೀರು ಬಳಸಿ ಮಾತ್ರ ಸಿದ್ಧಪಡಿಸುತ್ತಿದ್ದು ಎಲ್ಲಾ ವಸ್ತುಗಳೂ ಶೇ100ರಷ್ಟು ನೈಸರ್ಗಿಕ, ಸಸ್ಯಾಹಾರಿ ಮತ್ತು ಕೃಷಿ ಉತ್ಪನ್ನಗಳಾಗಿವೆ ಎಂದು ಹೇಳಿದೆ. "ಯಾವುದೇ ಪ್ರಾಣಿಯ ವಸ್ತುಗಳು ನಮ್ಮ ಯಾವುದೇ ಉತ್ಪನ್ನಗಳಲ್ಲಿ ಬಳಸಲಾಗುತ್ತಿಲ್ಲ. ನಾವು  ಆರೋಗ್ಯಕರ ಶುದ್ಧ ಭಾರತೀಯ ಉತ್ಪನ್ನಗಳನ್ನು ಯಾವುದೇ  ರಾಸಾಯನಿಕ ಅಥವಾ ಪ್ರಿಸರ್ವೇಟಿವಸ್ ಬಳಸದೆ ನಮ್ಮ  ಆಧುನಿಕ ತಯಾರಿಕಾ ಸ್ಥಳದಲ್ಲಿ ಆಹಾರ ಸುರಕ್ಷತಾ ನಿರ್ವಹಣಾ ವ್ಯವಸ್ಥೆಗನುಸಾರವಾಗಿ ತಯಾರಿಸುತ್ತಿದ್ದೇವೆ. ಇಂತಹ ನಕಲಿ ಸುದ್ದಿಗಳು  ದುರಾದೃಷ್ಟಕರ" ಎಂದು ಕಂಪೆನಿ ಹೇಳಿದೆ.


SHARE THIS

Author:

0 التعليقات: