ದೇಶದೊಳಗೆ ತೈಲ ಬೆಲೆ ಏರಿಕೆಯಾದರೆ ತಾಲಿಬಾನ್ ಹೇಗೆ ಕಾರಣ?: ಬಿಜೆಪಿ ಶಾಸಕನ ಹೇಳಿಕೆಗೆ ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: ದೇಶದೊಳಗೆ ತೈಲ ಬೆಲೆ ಏರಿಕೆಯಾದರೆ ತಾಲಿಬಾನ್ ಹೇಗೆ ಕಾರಣ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, `ತಾಲಿಬಾನಿಗಳಿಂದ ಭಾರತದಲ್ಲಿ ಬೆಲೆ ಏರಿಕೆ ಆಗುತ್ತಿದೆ ಎಂಬ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ದಡ್ಡತನದ ಪರಮಾವಧಿ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಆಗಿದೆಯಾ ಎಂಬುದು ಮುಖ್ಯ ಎಂದಿದ್ದಾರೆ.
ಈಗ ಕಚ್ಚಾ ತೈಲ ಬೆಲೆ ಎಷ್ಟಿದೆ? ಹಿಂದೆ ಮನಮೋಹನ್ ಸಿಂಗ್ ಅವರ ಸರಕಾರ ಇದ್ದಾಗ ಎಷ್ಟಿತ್ತು ಎಂದು ನೋಡಬೇಕಲ್ಲವೇ?' ಎಂದರು.
ಈ ಹಿಂದೆ ಕಚ್ಚಾ ತೈಲ ದರ ಬ್ಯಾರಲ್ ಒಂದಕ್ಕೆ 120 ಡಾಲರ್ ದಾಟಿತ್ತು ಆಗ, ಪೆಟ್ರೋಲ್ ಬೆಲೆ 71 ರೂಪಾಯಿ ಇತ್ತು, ಈಗ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 45 ಡಾಲರ್ ಇದೆ, ಪೆಟ್ರೋಲ್ ಬೆಲೆ 105 ರೂ.ಆಗಿದೆ. ಇದು ಜನರ ಮೇಲಿನ ಅನಗತ್ಯ ಹೊರೆಯಲ್ಲವೇ? ಜನ ಇದನ್ನು ಖುಷಿಯಿಂದ ಸ್ವೀಕರಿಸಿ, ಹೆಚ್ಚು ದುಡ್ಡು ಕೊಟ್ಟು ಖರೀದಿ ಮಾಡುವುದಾದರೆ ನನ್ನ ಅಭ್ಯಂತರವಿಲ್ಲ. 80 ರೂ.ಇದ್ದ ಅಡುಗೆ ಎಣ್ಣೆ 200 ರೂ.ಆಗಿದೆ. ಇದಕ್ಕೆ ತಾಲಿಬಾನಿಗಳು ಕಾರಣವೇ? ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿ, ಪೆಟ್ರೋಲ್ ದರ ಏರಿಕೆಗೆ ತಾಲಿಬಾನಿಗಳು ಕಾರಣ ಎಂದರೆ ಹೇಗೆ?' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತಾಲಿಬಾನಿಗಳಿಂದ ಭಾರತದಲ್ಲಿ ತೈಲ ಬೆಲೆಯೇರಿಕೆ ಆಗುತ್ತಿದೆ ಎಂಬ ಅರವಿಂದ ಬೆಲ್ಲದ್ ಹೇಳಿಕೆ ದಡ್ಡತನದ ಪರಮಾವಧಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗದೆ ಇದ್ದಾಗ ದೇಶದೊಳಗೆ ಮಾತ್ರ ತೈಲಬೆಲೆ ಏರಿದರೆ ಅದಕ್ಕೆ ತಾಲಿಬಾನ್ ಹೇಗೆ ಕಾರಣವಾಗುತ್ತೆ?
0 التعليقات: