Tuesday, 7 September 2021

ಮಾಜಿ ಸಚಿವ ಎ.ಕೆ.ಅಬ್ದುಲ್ ಸಮದ್ ನಿಧನ

 

ಮಾಜಿ ಸಚಿವ ಎ.ಕೆ.ಅಬ್ದುಲ್ ಸಮದ್ ನಿಧನ


ರಾಮನಗರ, ಸೆ.7: ರಾಮನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಆರೋಗ್ಯ ಸಚಿವ ಎ.ಕೆ.ಅಬ್ದುಲ್ ಸಮದ್(86) ಮಂಗಳವಾರ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಬ್ದುಲ್ ಸಮದ್ ಅವರು, ಬೆಂಗಳೂರು ಬೆನ್ಸನ್ ಟೌನ್ ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಅಬ್ದುಲ್ ಸಮದ್ 1978ರಲ್ಲಿ ರಾಮನಗರ ಕ್ಷೇತ್ರದ ಶಾಸಕರಾಗಿದ್ದರು. ಈ ವೇಳೆ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಅವರು ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1972ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿ ಸ್ಪರ್ಧಿಸಿದ್ದ ಅಬ್ದುಲ್ ಸಮದ್, (20,978 ಮತ) ಪ್ರತಿಸ್ಪರ್ಧಿ ನ್ಯಾಶನಲ್ ಕಾಂಗ್ರೆಸ್ ಆರ್ಗನೈಸೇಶನ್ (ಎನ್ ಸಿಒ) ಅಭ್ಯರ್ಥಿ ಬಿ‌.ಪುಟ್ಟಸ್ವಾಮಯ್ಯ (26,775) ಎದುರು 5,797 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

 ಆನಂತರ 1978ರ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಇಂದಿರಾ) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಬ್ದುಲ್ ಸಮದ್ 27,837 ಮತಗಳನ್ನು ಪಡೆದು ಜನತಾ ಪಕ್ಷದ ಅಭ್ಯರ್ಥಿ ಸಿ‌.ಬೋರಯ್ಯ ವಿರುದ್ಧ 6,962 ಮತಗಳ ಅಂತರದಿಂದ ಗೆದ್ದು ರಾಮನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಆನಂತರ 1978ರ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಇಂದಿರಾ) ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಬ್ದುಲ್ ಸಮದ್ 27,837 ಮತಗಳನ್ನು ಪಡೆದು ಜನತಾ ಪಕ್ಷದ ಅಭ್ಯರ್ಥಿ ಸಿ‌.ಬೋರಯ್ಯ ವಿರುದ್ಧ 6,962 ಮತಗಳ ಅಂತರದಿಂದ ಗೆದ್ದು ರಾಮನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ತದ ನಂತರ 1983ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷದ ಸಿ.ಬೋರಯ್ಯ( 45,076) ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾಗಿದ್ದ ಅಬ್ದುಲ್ ಸಮದ್ 18,876 ಮತಗಳಿಂದ ಸೋಲು ಅನುಭವಿಸಿದ್ದರು. ಆನಂತರ ರಾಜಕೀಯದಿಂದ ಅಂತರ ಕಾಯ್ದುಕೊಂಡ ಅಬ್ದುಲ್ ಸಮದ್, ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಬೆಂಗಳೂರಿನ ಖಬರ್ ಸ್ಥಾನದಲ್ಲಿ ಮಂಗಳವಾರ ಸಂಜೆ ನೆರವೇರಿಸಲಾಯಿತು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ: ಅಬ್ದುಲ್ ಸಮದ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದು, ಹಿರಿಯ ನಾಯಕನ ಅಗಲಿಕೆಯ ಸುದ್ದಿ ಕೇಳಿ ಬೇಸರವಾಗಿದೆ. ರಾಜ್ಯದ ಆರೋಗ್ಯ ಸಚಿವರಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾದದ್ದು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಸದಸ್ಯರಿಗೆ ಈ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.


      



SHARE THIS

Author:

0 التعليقات: