Tuesday, 7 September 2021

ಮಮ್ಮುಟ್ಟಿಗೆ 70 ವರ್ಷ : "ಇಂತಹ ಪ್ರತಿಭೆಯೊಂದಿಗೆ ಜೀವಿಸಿದ್ದು ಮಹಾಭಾಗ್ಯ" ಎಂದ ಮೋಹನ್‌ ಲಾಲ್‌


 ಮಮ್ಮುಟ್ಟಿಗೆ 70 ವರ್ಷ : "ಇಂತಹ ಪ್ರತಿಭೆಯೊಂದಿಗೆ ಜೀವಿಸಿದ್ದು ಮಹಾಭಾಗ್ಯ" ಎಂದ ಮೋಹನ್‌ ಲಾಲ್‌

ತಿರುವನಂತಪುರಂ: ಮಳಯಾಳಂ ಚಿತ್ರರಂಗದ ಚಿರ ಯುವಕ ಎಂದೇ ಖ್ಯಾತರಾಗಿರುವ ಸೂಪರ್‌ ಸ್ಟಾರ್‌ ಮಮ್ಮೂಟ್ಟಿ ಅವರು ತಮ್ಮ ೭೦ನೇ ಹರೆಯಕ್ಕೆ ಕಾಲಿಟ್ಟಿದ್ದಾರೆ. ಮಾಲಿವುಡ್‌ ನಲ್ಲಿ ಸಮಕಾಲೀನರೆಂದೆ ಪರಿಗಣಿಸಲ್ಪಟ್ಟಿರುವ ಮೋಹನ್‌ ಲಾಲ್‌ ಸೇರಿದಂತೆ ಹಲವಾರು ಮಂದಿ ಅಭಿಮಾನಿಗಳು ಮತ್ತು ಖ್ಯಾತನಾಮರು ಅವರಿಗೆ ಶುಭ ಹಾರೈಸಿದ್ದಾರೆ.

ತಮ್ಮ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ ಮೋಹನ್‌ ಲಾಲ್‌, "ಇಂದು ಇಚ್ಚಾಕ (ಮಮ್ಮೂಟ್ಟಿ)ರವರ ಹುಟ್ಟಿದ ದಿನವಾಗಿದೆ. ನನ್ನ ಹಿರಿಯ ಸಹೋದರನ ಹುಟ್ಟುಹಬ್ಬ ಎಂಬ ಕಾರಣಕ್ಕಾಗಿ ನಾನೂ ಇಂದಿನ ದಿನವನ್ನು ಆಚರಿಸುತ್ತಿದ್ದೇನೆ. ನನಗೆ ಓರ್ವ ಸಹೋದರನಾಗಿ, ಸ್ನೇಹಿತನಾಗಿ ನನ್ನ ಸಿನಿಮಾ ಬದುಕಿನಲ್ಲೂ, ನೈಜ ಬದುಕಿನಲ್ಲೂ ನನ್ನ ಎಲ್ಲಾ ನೋವುಗಳಲ್ಲೂ ನಲಿವುಗಳಲ್ಲೂ ನನ್ನೊಂದಿಗೆ ಆಸರೆಯಾಗಿ ನಿಲ್ಲುವ ವ್ಯಕ್ತಿಯಾಗಿದ್ದಾರೆ ಮಮ್ಮುಕ್ಕಾ. ಅವರ ಜನ್ಮದಿನವನ್ನು ನಾನು ನನ್ನ ಕುಟುಂಬಸ್ಥರೊಂದಿಗೆ ಆಚರಿಸುತ್ತಿದ್ದೇನೆ"

"ಇಂತಹಾ ಓರ್ವ ಪ್ರತಿಭೆಯೊಂದಿಗೆ ಜೀವಿಸಲು ಸಾಧ್ಯವಾಗಿದೆ ಎನ್ನುವುದೇ ನನ್ನ ಸೌಭಾಗ್ಯ. ಅಭಿನಯದಲ್ಲಿ ಛಾಪು ಮೂಡಿಸಿರುವ ಮಮ್ಮೂಟ್ಟಿಯವರೊಂದಿಗೆ ನನ್ನ ಹೆಸರನ್ನೂ ಜನರು ಸಂಬೋಧಿಸುತ್ತಾರೆ ಎನ್ನುವುದು ನನಗೆ ಸಂತೋಷದ ವಿಚಾರವಾಗಿದೆ. ನಾಲ್ಕು ದಶಕಗಳಲ್ಲಿ ೫೩ ಸಿನಿಮಾಗಳಲ್ಲಿ ನಾವು ಒಂದಾಗಿ ಅಭಿನಯಿಸಿದ್ದೇವೆ. ಇದೊಂದು ವಿಸ್ಮಯವೇ ಸರಿ. ವಿಶ್ವದ ಬೇರೆ ಎಲ್ಲೂ ಇಂತಹಾ ಸಿನಿಮಾ ಒಗ್ಗೂಡುವಿಕೆ ಕಾಣಲು ಅಸಾಧ್ಯ. ಇನ್ನು ಮುಂದೆ ಅಭಿನಯಿಸಲಿರುವ ಪಾತ್ರಗಳು ಈ ಹಿಂದೆ ಅಭಿನಯಿಸಿದ್ದಕ್ಕಿಂತ ಉತ್ತಮವಾಗಲಿದೆ ಎಂದು ಅಂದುಕೊಳ್ಳುತ್ತೇನೆ. ಇನ್ನು ಮುಂದೆಯೂ ಇಚ್ಚಾಕ (ಮಮ್ಮೂಟ್ಟಿ) ಮಳಯಾಳಂ ಚಿತ್ರರಂಗಕ್ಕೂ ಭಾರತೀಯ ಚಿತ್ರರಂಗಕ್ಕೂ ಉತ್ತಮ ಕೊಡುಗೆಗಳನ್ನು ನೀಡಲಿ ಎಂದು ನಾನು ಆಶಿಸುತ್ತೇನೆ. ಅವರಿಗೆ ದೇವರು ಆಯುರಾರೋಗ್ಯ ದಯಪಾಲಿಸಲಿ, ಇನ್ನು ಮುಂದೆಯೂ ನಾವು ಒಂದಾಗಿ ನಟಿಸುವಂತಾಗಲಿ. ಈ ದಿನದಂದು ಅವರಿಗೆ ನನ್ನ ಪ್ರೀತಿಯ ಮುತ್ತುಗಳು" ಎಂದು ಮೋಹನ್‌ ಲಾಲ್‌ ತಮ್ಮ ಸಾಮಾಜಿಕ ತಾಣ ಖಾತೆಗಳಲ್ಲಿ ವೀಡಿಯೊ ಮೂಲಕ ತಿಳಿಸಿದ್ದಾರೆ.

ಕೇರಳದಲ್ಲಿ ಮೋಹನ್‌ ಲಾಲ್‌ ಹಾಗೂ ಮಮ್ಮೂಟ್ಟಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಈ ಇಬ್ಬರು ನಟನಾ ದಿಗ್ಗಜರು ತಮ್ಮ ಭಾಂದವ್ಯವನ್ನು ಉತ್ತಮವಾಗಿ ಮುಂದುವರಿಸಿದ್ದಾರೆ. 


SHARE THIS

Author:

0 التعليقات: