Wednesday, 1 September 2021

ಉತ್ತರ ಪ್ರದೇಶದಲ್ಲಿ ಜ್ವರದಿಂದ ಒಂದೇ ವಾರದಲ್ಲಿ 50 ಮಕ್ಕಳು ಸಾವು!

 

ಉತ್ತರ ಪ್ರದೇಶದಲ್ಲಿ ಜ್ವರದಿಂದ ಒಂದೇ ವಾರದಲ್ಲಿ 50 ಮಕ್ಕಳು ಸಾವು!

ಲಕ್ನೋ: ಕಳೆದ ಒಂದೇ ವಾರದಲ್ಲಿ ಉತ್ತರ ಪ್ರದೇಶದ ಆಗ್ರಾ, ಫಿರೋಜಬಾದ್, ಮಥುರಾ, ಮಣಿಪುರಿ ಮತ್ತು ಇಟಾ ಹಾಗೂ ಕಾಸಗಂಜ್ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಮಕ್ಕಳು ತೀವ್ರ ಜ್ವರ, ನಿರ್ಜಲೀಕರಣ ಮತ್ತು ಪ್ಲೆಟ್ಲೆಟ್ ಪ್ರಮಾಣದ ಹಠಾತ್ ಕುಸಿತದಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಯಾ ಟಿವಿ ವರದಿ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ನಿರ್ಲಕ್ಷ್ಯ ಧೋರಣೆ ಆರೋಪದಡಿ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ತೆಗೆದು ಹಾಕಲಾಗಿದ್ದು, ರೋಗ ನಿಯಂತ್ರಣಕ್ಕೆ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಫಿರೋಜಬಾದ್ ಜಿಲ್ಲೆಯಲ್ಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ. ಅದರ ಜೊತೆ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಕಳೆದ ಸೋಮವಾರ ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್, ಡೆಂಗ್ಯೂ ರೋಗದ ನಿಯಂತ್ರಣ ಮತ್ತು ನಿರ್ವಹಣೆ ಬಗ್ಗೆ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಿದರು.

ಉತ್ತರ ಪ್ರದೇಶದ ಫಿರೋಜಬಾದ್ ಜಿಲ್ಲೆಯಲ್ಲಿ ಕಳೆದ ಒಂದೇ ವಾರದಲ್ಲಿ 40 ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಪ್ರಾಥಮಿಕ ಕಾರಣ ಡೆಂಗ್ಯೂ ಎಂದು ತೋರುತ್ತದೆ, ಆದರೂ ಇತರ ಕಾರಣಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಆಗ್ರಾ ವಿಭಾಗೀಯ ಆಯುಕ್ತ ಅಮಿತ್ ಗುಪ್ತಾ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. "ನಾವು ಸಂಬಂಧಪಟ್ಟ ಆಸ್ಪತ್ರೆಗಳಿಗೆ ಪ್ಲೇಟ್‌ಲೆಟ್‌ಗಳನ್ನು ಒದಗಿಸಲು ಕ್ರಮಗಳನ್ನು ಹೆಚ್ಚಿಸಿದ್ದೇವೆ ಮತ್ತು ಅವುಗಳನ್ನು ಆಗ್ರಾದಿಂದಲೂ ತರಲಾಗುತ್ತಿದೆ. ಅಧಿಕೃತ ತಂಡಗಳಿಂದ ತಪಾಸಣೆ ನಡೆಸಲಾಗುತ್ತಿದೆ," ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸಾವಿನ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 7 ರಿಂದ 16ರವರೆಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸಲು ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಈ ವೇಳೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜ್ವರ ಹಾಗೂ ಕೊವಿಡ್-19 ಲಕ್ಷಣಗಳಿರುವ ಜನರ ಆರೋಗ್ಯ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.SHARE THIS

Author:

0 التعليقات: