Tuesday, 7 September 2021

ಮಹಿಳೆಯರ ವಿರುದ್ಧ ಅಪರಾಧಗಳ ದೂರುಗಳಲ್ಲಿ ಶೇ.46ರಷ್ಟು ಹೆಚ್ಚಳ: ರೇಖಾ ಶರ್ಮಾ


 ಮಹಿಳೆಯರ ವಿರುದ್ಧ ಅಪರಾಧಗಳ ದೂರುಗಳಲ್ಲಿ ಶೇ.46ರಷ್ಟು ಹೆಚ್ಚಳ: ರೇಖಾ ಶರ್ಮಾ

ಹೊಸದಿಲ್ಲಿ: ಕಳೆದ ವರ್ಷದ ಮೊದಲ ಎಂಟು ತಿಂಗಳಿಗೆ ಹೋಲಿಸಿದರೆ 2021ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳ ದೂರುಗಳಲ್ಲಿ ಶೇ.46ರಷ್ಟು ಏರಿಕೆಯಾಗಿದ್ದು, ಈ ಪೈಕಿ ಅರ್ಧಕ್ಕೂ ಹೆಚ್ಚಿನ ದೂರುಗಳು ಉತ್ತರ ಪ್ರದೇಶದಿಂದ ದಾಖಲಾಗಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ಆಯೋಗವು ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರಿಂದಾಗಿ ಸಾರ್ವಜನಿಕರಲ್ಲಿ ಅದರ ಕಾರ್ಯದ ಕುರಿತು ಹೆಚ್ಚಿನ ತಿಳುವಳಿಕೆ ಮೂಡಿದೆ. ಇದು ದೂರುಗಳು ಹೆಚ್ಚಲು ಕಾರಣವಾಗಿದೆ ಎಂದರು.

ಈ ವರ್ಷದ ಜನವರಿಯಿಂದ ಆಗಸ್ಟ್ ವರೆಗೆ ಆಯೋಗವು ಮಹಿಳೆಯರ ವಿರುದ್ಧದ ಅಪರಾಧಗಳ ಒಟ್ಟು 19,953 ದೂರುಗಳನ್ನು ಸ್ವೀಕರಿಸಿದ್ದು,ಕಳೆದ ವರ್ಷದ ಇದೇ ಅವಧಿಯಲ್ಲಿ 13,618 ದೂರುಗಳು ದಾಖಲಾಗಿದ್ದವು. ಜುಲೈ ತಿಂಗಳಲ್ಲಿ 3,248 ದೂರುಗಳು ದಾಖಲಾಗಿದ್ದು,ಇದು 2015 ಜೂನ್ ನಿಂದೀಚಿಗೆ ತಿಂಗಳೊಂದರಲ್ಲಿ ಗರಿಷ್ಠವಾಗಿದೆ ಎಂದು ಅವರು ತಿಳಿಸಿದರು.

7,036ರಷ್ಟು ಅತ್ಯಧಿಕ ಸಂಖ್ಯೆಯ ದೂರುಗಳು ಮಹಿಳೆಯ ಘನತೆಯಿಂದ ಬದುಕುವ ಹಕ್ಕಿನಡಿ ದಾಖಲಾಗಿದ್ದು,ಕೌಟುಂಬಿಕ ಹಿಂಸೆಗೆ ಸಂಬಂಧಿಸಿದಂತೆ 4,289,ವಿವಾಹಿತ ಮಹಿಳೆಯರಿಗೆ ಕಿರುಕುಳ ಅಥವಾ ವರದಕ್ಷಿಣೆ ಹಿಂಸೆಗೆ ಸಂಬಂಧಿಸಿದಂತೆ 2,923, ಮಹಿಳೆಯರಿಗೆ ಲೈಂಗಿಕ ಕಿರುಕುಳದ ಬಗ್ಗೆ 1,116,ಅತ್ಯಾಚಾರ ಮತ್ತು ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ 1,022 ಮತ್ತು ಸೈಬರ್ ಅಪರಾಧಗಳ ಕುರಿತು 585 ದೂರುಗಳು ದಾಖಲಾಗಿವೆ ಎಂದ ಶರ್ಮಾ,ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅತ್ಯಂತ ಹೆಚ್ಚಿನ ದೂರುಗಳನ್ನು(10,084) ಉತ್ತರ ಪ್ರದೇಶದಿಂದ ಸ್ವೀಕರಿಸಲಾಗಿದ್ದು,ದಿಲ್ಲಿ (2,147),ಹರ್ಯಾಣ (995) ಮತ್ತು ಮಹಾರಾಷ್ಟ್ರ (974) ನಂತರದ ಸ್ಥಾನಗಳಲ್ಲಿವೆ ಎಂದು ತಿಳಿಸಿದರು.


SHARE THIS

Author:

0 التعليقات: