Thursday, 2 September 2021

ಐಡಾ ಚಂಡಮಾರುತಕ್ಕೆ ನ್ಯೂಯಾರ್ಕ್ ತತ್ತರ : 41 ಮಂದಿ ಮೃತ್ಯು

 

ಐಡಾ ಚಂಡಮಾರುತಕ್ಕೆ ನ್ಯೂಯಾರ್ಕ್ ತತ್ತರ : 41 ಮಂದಿ ಮೃತ್ಯು

ನ್ಯೂಯಾರ್ಕ್: ಐಡಾ ಚಂಡಮಾರುತದ ಅಬ್ಬರಕ್ಕೆ ನ್ಯೂಯಾರ್ಕ್ ಪ್ರದೇಶ ತತ್ತರಿಸಿದ್ದು, ಚಂಡಮಾರುತದ ಪರಿಣಾಮ ಭಾರಿ ಮಳೆ ಹಾಗೂ ಮಿಂಚಿನ ಪ್ರವಾಹದಿಂದಾಗಿ 41 ಮಂದಿ ಮೃತಪಟ್ಟಿದ್ದಾರೆ.

"ಹವಾಮಾನ ಬದಲಾವಣೆಯ ಪರಿಣಾಮವಾದ ಈ ದುರಂತದಲ್ಲಿ ಹಲವಾರು ಮಂದಿ ತಮ್ಮ ವಸತಿ ಸಂಕೀರ್ಣಗಳ ಬೇಸ್‌ಮೆಂಟ್‌ಗಳಲ್ಲೇ ಶವವಾಗಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ದಾಖಲೆ ಮಳೆಯ ಪರಿಣಾಮವಾಗಿ ಹಿಂದೆಂದೂ ಕಂಡರಿಯದಷ್ಟು ಭೀಕರ ಪ್ರವಾಹದಿಂದಾಗಿ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಟ್ರ್ಯಾಕ್‌ಗಳು ನೀರಿನಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಸುರಂಗಮಾರ್ಗ ಸೇವೆಗಳನ್ನು ಮುಚ್ಚಲಾಗಿದೆ. "ನನ್ನ 50 ವರ್ಷಗಳ ಜೀವಿತಾವಧಿಯಲ್ಲಿ ಇದುವರೆಗೆ ಇಂಥ ಮಳೆ ಕಂಡಿಲ್ಲ" ಎಂದು ಮ್ಯಾನ್‌ ಹ್ಯಾಟನ್ ರೆಸ್ಟೋರೆಂಟ್ ಮಾಲಕ ಮೆತೋಡಿಜಾ ಮಿಹಜ್‌ಲೋವ್ ಉದ್ಗರಿಸಿದ್ದಾರೆ. ಇವರ ರೆಸ್ಟೋರೆಂಟ್ ಬೇಸ್‌ಮೆಂಟ್ ಕೂಡಾ ನೀರಿನಲ್ಲಿ ಮುಳುಗಿದೆ.

ನ್ಯೂಯಾರ್ಕ್‌ನ ಲಗಾರ್ಡಿಯಾ ಮತ್ತು ಜೆಎಫ್‌ಕೆ ವಿಮಾನ ನಿಲ್ದಾಣಗಳಲ್ಲಿ ಹಾಗೂ ನ್ಯೂಯಾರ್ಕ್ ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳಲ್ಲಿ ನೀರು ನಿಂತಿದ್ದು, ನೂರಾರು ವಿಮಾನಗಳ ಸೇವೆ ರದ್ದುಪಡಿಸಲಾಗಿದೆ.

"ನಾವು ಜತೆಗಿದ್ದೇವೆ. ಸಂತ್ರಸ್ತರ ನೆರವಿಗೆ ದೇಶ ಸಜ್ಜಾಗಿದೆ" ಎಂದು ಅಧ್ಯಕ್ಷ ಬೈಡನ್ ಘೋಷಿಸಿದ್ದಾರೆ. ಈಗಾಗಲೇ ಐಡಾ ಚಂಡಮಾರುತದಿಂದ ಧ್ವಂಸವಾಗಿರುವ ಲೂಸಿಯಾನಾಗೆ ಬೈಡನ್ ಶುಕ್ರವಾರ ಭೇಟಿ ನೀಡಲಿದ್ದಾರೆ. ಇಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, 10 ಲಕ್ಷಕ್ಕೂ ಅಧಿಕ ಮಂದಿ ಕತ್ತಲಲ್ಲಿ ದಿನ ಕಳೆಯುವಂತಾಗಿದೆ.

ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಪ್ರಮುಖ ರಸ್ತೆಗಳು ಪ್ರವಾಹದಿಂದ ಮುಚ್ಚಿದ್ದು, ಮ್ಯಾನ್‌ಹ್ಯಾಟನ್, ಬ್ರಾಕ್ಸ್ ಮತ್ತು ಕ್ವೀನ್ಸ್ ಪ್ರದೇಶಗಳಲ್ಲಿ ಕಾರುಗಳು ಮುಳುಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ. ನ್ಯೂಜೆರ್ಸಿಯಲ್ಲಿ 23 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಗವರ್ನರ್ ಫಿಲ್ ಮರ್ಫಿ ಪ್ರಕಟಿಸಿದ್ದಾರೆ.

ಮೃತಪಟ್ಟವರಲ್ಲಿ ಬಹುತೇಕ ಮಂದಿ ಮುಳುಗಿದ ವಾಹನಗಳಲ್ಲಿ ಸಿಕ್ಕಿಹಾಕಿಕೊಂಡವರು. ನ್ಯೂಯಾರ್ಕ್‌ನಲ್ಲಿ 12 ಮಂದಿ ಮೃತಪಟ್ಟಿದ್ದು, ಈ ಪೈಕಿ 11 ಮಂದಿ ತಮ್ಮ ವಸತಿ ಸಂಕೀರ್ಣದ ಬೇಸ್‌ಮೆಂಟ್‌ನಿಂದ ತಪ್ಪಿಸಿಕೊಳ್ಳಲಾಗದೇ ಜಲಸಮಾಧಿಯಾದರು ಎಂದು ವಿವರಿಸಿದ್ದಾರೆ.SHARE THIS

Author:

0 التعليقات: