Thursday, 30 September 2021

ಅಕ್ಟೋಬರ್ 2ಕ್ಕೆ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ: ಸಚಿವ ಆನಂದ್ ಸಿಂಗ್

 ಅಕ್ಟೋಬರ್ 2ಕ್ಕೆ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ: ಸಚಿವ ಆನಂದ್ ಸಿಂಗ್

ವಿಜಯನಗರ: ರಾಜ್ಯದ ಮೂವತ್ತೊಂದನೆ ನೂತನ ವಿಜಯನಗರ ಜಿಲ್ಲೆಯನ್ನು ಅಕ್ಟೋಬರ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಕೋವಿಡ್ ಮಾರ್ಗಸೂಚಿ ಅನುಸರಿಸಿ ಜಿಲ್ಲೆ ಉದ್ಘಾಟನೆಯನ್ನು ಅದ್ದೂರಿಯಾಗಿ ನೆರವೇರಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಹೊಸಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಕಾರ್ಯಕ್ರಮ ನಡೆಯಲಿರುವ ನಗರದ ಕ್ರೀಡಾಂಗಣದ ಸುತ್ತ ಎಂಟು ಬೃಹತ್ ಎಲ್‍ಇಡಿ ಪರದೆ ಅಳವಡಿಸಲಾಗುವುದು. ನಗರದ ಪ್ರಮುಖ ಮೈದಾನಗಳಲ್ಲೂ ಎಲ್‍ಇಡಿ ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲ್ಲ ತಾಲೂಕುಗಳಲ್ಲಿ ಎಲ್‍ಇಡಿ ಪರದೆ, ಆಸನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುವುದು. ಅ.2ರ ಸಂಜೆ 4ಕ್ಕೆ ನಗರದ ವಡಕರಾಯ ದೇವಸ್ಥಾನದಿಂದ ಕಾರ್ಯಕ್ರಮ ನಡೆಯಲಿರುವ ಕ್ರೀಡಾಂಗಣದ ವರೆಗೆ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಸ್ಥಳೀಯ ಮತ್ತು ರಾಜ್ಯದ ನಾನಾ ಭಾಗಗಳ 80 ಕಲಾ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ ಎಂದು ಆನಂದ್ ಸಿಂಗ್ ವಿವರ ನೀಡಿದರು.

ಅ.2ರ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಜಿಲ್ಲೆ ಉದ್ಘಾಟಿಸಲಿದ್ದು, ನೂತನ ಜಿಲ್ಲೆ ರಚನೆಗೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನ ಆಚರಿಸಲಾಗುವುದು. ಇದೇ ವೇಳೆ 350 ಕೋಟಿ ರೂ.ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.

ಅ.3ರ ಸಂಜೆ 4ಕ್ಕೆ ತಾಲೂಕಿನ ಗಾಳೆಮ್ಮನ ಗುಡಿಯಿಂದ ಎತ್ತಿನ ಬಂಡಿಗಳ ಸ್ಪರ್ಧೆ ನಡೆಯಲಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಲಿದ್ದು, ಅತ್ಯುತ್ತಮ ಎತ್ತಿನ ಬಂಡಿಗಳಿಗೆ ಬಹುಮಾನ ನೀಡಲಾಗುವುದು. ಸಂಜೆ 6ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಕೇಂದ್ರ ಕೌಶಲ ಅಬಿವೃದ್ಧಿ, ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ವಿದ್ಯಾರಣ್ಯರ ಹೆಸರು: ನೂತನ ಜಿಲ್ಲೆ ಉದ್ಘಾಟನಾ ಸಮಾರಂಭದ ವೇದಿಕೆಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ಗುರು ವಿದ್ಯಾರಣ್ಯರ ಹೆಸರಿಡಲಾಗಿದೆ. ಮುಖ್ಯ ದ್ವಾರಗಳಿಗೆ ಹಕ್ಕ–ಬುಕ್ಕರ ಹೆಸರು ಇರಿಸಿದ್ದು, ವೇದಿಕೆಯ ಎರಡೂ ಬದಿಯಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಸ್ವಸಹಾಯ ಸಂಘಗಳ ಮಳಿಗೆಗಳಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ನೂತನ ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭ ನಿಮಿತ್ತ ಎರಡು ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಒಟ್ಟು 5 ಕೋಟಿ ರೂ. ವೆಚ್ಚವಾಗಲಿದ್ದು, ನಾಲ್ಕು ಕೋಟಿ ರೂ.ಗಳನ್ನು ರಾಜ್ಯ ಸರಕಾರವು, ಉಳಿದ ಹಣವನ್ನು ಸಂಘ-ಸಂಸ್ಥೆಗಳು, ಸಿಎಸ್‍ಆರ್ ಅಡಿಯಲ್ಲಿ ನೆರವು ಪಡೆದುಕೊಳ್ಳಲಾಗುವುದು. ಎರಡು ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಗಣ್ಯರು ಮತ್ತು ಸಾರ್ವಜನಿಕರಿಗೆ ಪಾಸ್ ವಿತರಣೆ ಮಾಡಲಾಗುವುದು ಎಂದು ವಿಶೇಷ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ತಿಳಿಸಿದರು.


SHARE THIS

Author:

0 التعليقات: