Saturday, 11 September 2021

ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ ಪ್ರತಿ ಘಂಟೆಗೆ 21 ಜನರನ್ನು ಒಕ್ಕಲೆಬ್ಬಿಸಲಾಗಿತ್ತು: ವರದಿ


 ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ ಪ್ರತಿ ಘಂಟೆಗೆ 21 ಜನರನ್ನು ಒಕ್ಕಲೆಬ್ಬಿಸಲಾಗಿತ್ತು: ವರದಿ

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದಿಂದ ಭಾರತವು ತಲ್ಲಣಗೊಂಡಿದ್ದ ಸಂದರ್ಭದಲ್ಲಿಯೇ ಮಾರ್ಚ್ 2020 ಮತ್ತು ಜುಲೈ 2021ರ ನಡುವೆ ದೇಶದಲ್ಲಿ 2,50,000ಕ್ಕೂ ಹೆಚ್ಚಿನ ಜನರು ತಮ್ಮ ಮನೆಗಳಿಂದ ಒಕ್ಕಲೆಬ್ಬಿಸಲ್ಪಟ್ಟಿದ್ದಾರೆ. ಅಂದರೆ ಪ್ರತಿ ಗಂಟೆಗೆ 21 ಜನರನ್ನು ನಿರ್ವಸಿತರನ್ನಾಗಿಸಲಾಗಿದೆ.

 ಭೂಮಿ ಮತ್ತು ವಸತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂಶೋಧನೆ,ಶಿಕ್ಷಣ ಮತ್ತು ವಕಾಲತ್ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸ್ವತಂತ್ರ ಸಂಸ್ಥೆ ಹೌಸಿಂಗ್ ಆ್ಯಂಡ್ ಲ್ಯಾಂಡ್ ರೈಟ್ಸ್ ನೆಟ್ವರ್ಕ್ (ಎಚ್ಎಲ್ಆರ್ಎನ್) ಈ ಬಗ್ಗೆ ವಿಶ್ಲೇಷಣೆಯನ್ನು ನಡೆಸಿದ್ದು,ಜನವರಿ 1,2021 ಮತ್ತು ಜುಲೈ 31,2021ರ ನಡುವೆ ದೇಶಾದ್ಯಂತ ಸರಕಾರಿ ಅಧಿಕಾರಿಗಳು ಕನಿಷ್ಠ 24,445 ಮನೆಗಳನ್ನು ನೆಲಸಮಗೊಳಿಸಿದ್ದು, 1,69,176 ಜನರು ಸಂತ್ರಸ್ತರಾಗಿದ್ದಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. 

ಈ ಪೈಕಿ ಸುಮಾರು 13,750 ಜನರನ್ನು ಕೋವಿಡ್ ಎರಡನೇ ಅಲೆಯು ಉತ್ತುಂಗದಲ್ಲಿರುವಾಗ ಮತ್ತು ಪರಿಣಾಮವಾಗಿ 2021 ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾರಿಯಲ್ಲಿದ್ದ ಲಾಕ್ಡೌನ್ ನಡುವೆಯೇ ಅವರ ಮನೆಗಳಿಂದ ಹೊರದಬ್ಬಲಾಗಿತ್ತು.

ತಮ್ಮ ಮನೆಗಳಲ್ಲಿಯೇ ಇರುವಂತೆ ಜನರನ್ನು ಆದೇಶಿಸಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಕಾನೂನುಬಾಹಿರ ನೆಲಸಮ ಕಾರ್ಯವನ್ನು ಕೈಗೊಂಡಿದ್ದರು. ಬಹುಶಃ ಅವರು ಜನರ ಚಲನವಲನ ಮತ್ತು ನ್ಯಾಯಾಲಯಗಳು ಸೇರಿದಂತೆ ಪರಿಹಾರ ಮಾರ್ಗಗಳು ಸೀಮಿತವಾಗಿದ್ದ ಕರ್ಫ್ಯೂಸದೃಶ ಸ್ಥಿತಿಗಳ ಲಾಭವನ್ನು ಪಡೆದುಕೊಂಡಿದ್ದರು ಎಂದು ವರದಿಯು ತಿಳಿಸಿದೆ.

2020ನೇ ಸಾಲಿನಲ್ಲಿ ಕೊಳಗೇರಿ ನಿರ್ಮೂಲನ/ಅತಿಕ್ರಮಣ ತೆರವು/ನಗರ ಸುಂದರೀಕರಣ,ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳು,ಪರಿಸರ ಯೋಜನೆಗಳು,ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ,ವಿಪತ್ತು ನಿರ್ವಹಣೆ ಪ್ರಯತ್ನಗಳು ಮತ್ತು ರಾಜಕೀಯ ರ್ಯಾಲಿಗಳು ಹಾಗೂ ಉದ್ದೇಶಿತ ತಾರತಮ್ಯದಂತಹ ಹಲವು ಕಾರಣಗಳಿಂದಾಗಿ ಜನರನ್ನು ತಮ್ಮ ವಾಸಸ್ಥಾನಗಳಿಂದ ಒಕ್ಕಲೆಬ್ಬಿಸಲಾಗಿತ್ತು.

ಆ ವರ್ಷದಲ್ಲಿ ಪರಿಸರ ಕಾರಣಗಳಿಂದಾಗಿ ಅತ್ಯಂತ ಹೆಚ್ಚಿನ ಸಂಖ್ಯೆಯ,ಅಂದರೆ ಶೇ.49ರಷ್ಟು ಜನರು ತಮ್ಮ ಮನೆಗಳಿಂದ ತೆರವುಗೊಳಿಸಲ್ಪಟ್ಟಿದ್ದರು ಎಂದು ವರದಿಯು ಬೆಟ್ಟು ಮಾಡಿದೆ.

ಆದರೆ ಆ ವರ್ಷ ಒಕ್ಕಲೆಬ್ಬಿಸಲ್ಪಟ್ಟ ಹೆಚ್ಚಿನ ಜನರಿಗೆ ಸರಕಾರವು ಯಾವುದೇ ಪುನರ್ವಸತಿಯನ್ನು ಕಲ್ಪಿಸಿಲ್ಲ. ಮಾಹಿತಿಯು ಲಭ್ಯವಿರುವ ಕೇವಲ ಶೇ.13ರಷ್ಟು ದಾಖಲಿತ ಪ್ರಕರಣಗಳಲ್ಲಿ ಪುನರ್ವಸತಿ/ಭಾಗಶಃ ಪುನರ್ವಸತಿ/ಸ್ವಲ್ಪ ಪರಿಹಾರವನ್ನು ಒದಗಿಸಲಾಗಿದೆ. ಈ ನೆಲಸಮ ಪ್ರಕರಣಗಳಲ್ಲಿ ಹೆಚ್ಚಿನವು ನ್ಯಾಯಾಲಯಗಳು ಮತ್ತು ಕೇಂದ್ರ ಸರಕಾರದಿಂದ ಅನುಮೋದಿಸಲ್ಪಟ್ಟಿದ್ದವು ಎಂದು ವರದಿಯು ತಿಳಿಸಿದೆ.

ಇತ್ತೀಚಿಗೆ ಅಂದರೆ ಸೆ.7ರಂದು ಫರೀದಾಬಾದ್ ಜಿಲ್ಲಾಡಳಿತವು ಅರಾವಳಿ ಭೂಮಿಯಲ್ಲಿರುವ ದಿಲ್ಲಿ-ಎನ್ಸಿಆರ್ ಜಮಾಯ್ ಕಾಲನಿಯಲ್ಲಿ ನೆಲಸಮ ಕಾರ್ಯವನ್ನು ಆರಂಭಿಸಿದೆ. ಇದಕ್ಕೂ ಮುನ್ನ ಜುಲೈನಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಫರೀದಾಬಾದ್ ಮಹಾನಗರ ಪಾಲಿಕೆಯು ಸಹ ಖೋರಿಗಾಂವ್ ನಲ್ಲಿಯ ಹೆಚ್ಚಾಗಿ ದಿನಗೂಲಿ ಕಾರ್ಮಿಕರಿಗೆ ಸೇರಿದ್ದ ಕನಿಷ್ಠ 12,000 ಮನೆಗಳನ್ನು ನೆಲಸಮಗೊಳಿಸಿತ್ತು.

ಒಕ್ಕಲೆಬ್ಬಿಸುವ ಹಲವಾರು ವಾರಗಳ ಮೊದಲೇ ಅಧಿಕಾರಿಗಳು ಕಾಲನಿಗೆ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದ್ದರು. ಬೇರೆಲ್ಲಿಯೂ ತೆರಳಲು ಸಾಧ್ಯವಿಲ್ಲದೆ ತಮ್ಮ ನೆಲಸಮಗೊಂಡಿರುವ ಮನೆಗಳ ಅವಶೇಷಗಳ ನಡುವೆಯೇ ಬದುಕು ದೂಡುತ್ತಿರುವ ಕೆಲವು ನಿವಾಸಿಗಳು ತಮಗೆ ತ್ವರಿತ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

2011ರ ಭಾರತದ ಜನಗಣತಿ ವರದಿಯಂತೆ ಸುಮಾರು 6.5 ಕೋ.ಜನರು ನಗರ ಪ್ರದೇಶಗಳ ಕೊಳಗೇರಿಗಳಲ್ಲಿ ವಾಸವಾಗಿದ್ದಾರೆ. ಸುಮಾರು 1.60 ಕೋ.ಜನರು ಒಕ್ಕಲೆಬ್ಬಿಸುವಿಕೆ ಮತ್ತು ಸ್ಥಳಾಂತರಗಳ ಬೆದರಿಕೆಯಡಿ ಬದುಕುತ್ತಿದ್ದಾರೆ ಎಂದು ವರದಿಯು ಹೇಳಿದೆ. ಕೇಂದ್ರ ಸರಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2022ರ ವೇಳೆಗೆ ನಗರ ಪ್ರದೇಶಗಳ ಬಡವರಿಗೆ ಅಗ್ಗದ ವಸತಿಗಳನ್ನು ಒದಗಿಸುವ ಭರವಸೆಯನ್ನೇನೋ ನೀಡಿದೆ,‌ ಆದರೆ ಈ ಭರವಸೆ ಈಡೇರುತ್ತದೆಯೇ ಎಂಬ ಪ್ರಶ್ನೆಗಳೆದ್ದಿವೆ.


SHARE THIS

Author:

0 التعليقات: