Sunday, 15 August 2021

ರಾಜ್ಯದ ನಾಡು, ನುಡಿ, ಜಲ, ಭಾಷೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ


 ರಾಜ್ಯದ ನಾಡು, ನುಡಿ, ಜಲ, ಭಾಷೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದ  ನಾಡು, ನುಡಿ, ಜಲ, ಭಾಷೆಯ ವಿಚಾರದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಮೇಕೆದಾಟು ಯೋಜನೆಯನ್ನು ಆದಷ್ಟು ಬೇಗ ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರವಿವಾರ ನಗರದ ಮಾಣಿಕ್ ಷಾ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಜಲ ವಿವಾದ ಇದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯಡಿ 5.5 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿ ಮಾಡಬೇಕಿದೆ. ಅದಕ್ಕೆ ಸಣ್ಣ ಕಾನೂನು ಹೋರಾಟದ ಅಗತ್ಯವಿದೆ. ಆ ಮೂಲಕ ಅಲ್ಲಿನ ಭೂಮಿಗೆ ನೀರು ಹರಿಸುವ ಕೆಲಸ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಮೇಕೆದಾಟು, ಮಹದಾಯಿ ಯೋಜನೆ ಆರಂಭಿಸಬೇಕಿದೆ, ಮೇಕೆದಾಟು ಬಗ್ಗೆ ಕೇಂದ್ರ ಸರಕಾರಕ್ಕೆ ತಿಳಿಸಿ, ಅಗತ್ಯ ಪರವಾನಗಿ ಪಡೆದು ಆದಷ್ಟು ಬೇಗ ಯೋಜನೆ ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.

ಕೊನೆಯ ಹಂತದವರೆಗೂ ಜನರ ಬದುಕು ಮೇಲ್ದರ್ಜೆಗೇರಿಸುವ ಕೆಲಸ ಮಾಡುತ್ತೇವೆ. ಕನ್ನಡ ನಾಡಿನ ಕಟ್ಟ ಕಡೆಯ ಕುಟುಂಬ, ದೀನ ದಲಿತ, ಅಲ್ಪಸಂಖ್ಯಾತ ಸೇರಿದಂತೆ ಪ್ರತಿಯೊಬ್ಬರ ಬದುಕು ಹಸನಾಬೇಕು. ಸುಖ, ಶಾಂತಿ ನೆಮ್ಮದಿಯ ಬದುಕು ಎಲ್ಲರಿಗೂ ಸಿಗಬೇಕು ಎನ್ನುವ ಧ್ಯೇಯವಿರಿಸಿಕೊಂಡು ಕೆಲಸ ಮಾಡುತ್ತೇವೆ. ನಮಗೆ 20 ತಿಂಗಳು ಮಾತ್ರ ಅವಕಾಶವಿದೆ. ಅಷ್ಟರಲ್ಲಿ ದೀರ್ಘಾವಧಿ, ಅಲ್ಪಾವಧಿಯ ಯೋಜನೆ ಮಾಡಲಿದ್ದೇವೆ. ಅಲ್ಪಾವಧಿ ಯೋಜನೆ ಶೇ. 100 ರಷ್ಟು ಅನುಷ್ಠಾನಕ್ಕೆ ತರುವ ಭರವಸೆ ನೀಡುತ್ತೇನೆ ಎಂದರು.

ಕೊರೋನ ಸೋಂಕು ದೊಡ್ಡ ಆಘಾತ ನೀಡಿದೆ. ಕೊರೋನ ನಿಯಂತ್ರಣಕ್ಕೆ ಬಿಎಸ್ ವೈ ಅವರು  ಪಟ್ಟಿರುವ ಶ್ರಮ ನೆನಪಿಸಿಕೊಳ್ಳುತ್ತೇನೆ. ಅವರ ಪ್ರಯತ್ನದ ಪರಿಣಾಮ ಕೊರೋನ ನಿಯಂತ್ರಣ ಸಾಧ್ಯವಾಗಿದೆ. ಹೀಗಾಗಿ, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ, ಅವರ ಅಭಿವೃದ್ಧಿ ಕಾರ್ಯ ನಮಗೆ ಮಾರ್ಗದರ್ಶಿ ಆಗಿದೆ. ಈಗ ನಾವು ಮೂರನೇ ಅಲೆಯ ಭೀತಿಯಲ್ಲಿದ್ದೇವೆ. ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ, ಖುದ್ದಾಗಿ ಭೇಟಿ ನೀಡಿ ಕ್ರಮ ಕೈಗೊಂಡಿದ್ದೇನೆ. ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ಮಾರ್ಗಸೂಚಿ ಪಾಲಿಸಿದರೆ ನಮ್ಮ ಸರಕಾರ ಕನ್ನಡಿಗರನ್ನು ಕೊರೋನದಿಂದ ಪಾರು ಮಾಡಲು ವಿಶ್ವಾಸಭರಿತವಾಗಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

ನನ್ನ ಬಗ್ಗೆ ಹಲವರು ಅನುಮಾನ, ಟೀಕೆ ವ್ಯಕ್ತಪಡಿಸಿದ್ದಾರೆ. ಅದನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಮೆಟ್ಟಿಲಾಗಿ ಮಾಡಿಕೊಂಡು ನಾಡಿನ ಅಭಿವೃದ್ಧಿ ಮಾಡುತ್ತೇನೆ. ಪ್ರತಿಯೊಬ್ಬ ಕನ್ನಡಿಗರು ಸರಕಾರದ ಬಗ್ಗೆ ಚಿಂತನೆ ಮಾಡುತ್ತಿದ್ದಾನೆ. ಅವರಿಗೆ ನಾನು ಭರವಸೆ ನೀಡುತ್ತೇನೆ ಎಂದರು.


SHARE THIS

Author:

0 التعليقات: