ನ್ಯಾಯಾಂಗಕ್ಕೆ ಸಿಬಿಐ, ಸಿಐಡಿ ಯಾವುದೇ ಸಹಾಯ ಮಾಡುತ್ತಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ನ್ಯಾಯಾಧೀಶರುಗಳು ಹಾಗೂ ನ್ಯಾಯಾಂಗ ಅಧಿಕಾರಿಗಳು ಎದುರಿಸುತ್ತಿರುವ ಬೆದರಿಕೆಗಳು ಹಾಗೂ ನಿಂದನೆಗಳಿಗೆ ಸಂಬಂಧಿಸಿದಂತೆ ಸಿಬಿಐ ಹಾಗೂ ಗುಪ್ತಚರ ಬ್ಯುರೋ ಯಾವುದೇ ರೀತಿಯಲ್ಲಿ ನ್ಯಾಯಾಂಗಕ್ಕೆ ಸಹಾಯ ಮಾಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.
ಕುಖ್ಯಾತ ಗ್ಯಾಂಗ್ಸ್ಟರ್ ಗಳು ಹಾಗೂ ಉನ್ನತ ವ್ಯಕ್ತಿಗಳನ್ನೊಳಗೊಂಡ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. ಕೆಲವು ಕಡೆ ವಿಚಾರಣಾ ನ್ಯಾಯಾಲಯಗಳ ಹಾಗೂ ಹೈಕೋರ್ಟುಗಳ ನ್ಯಾಯಾಧೀಶರುಗಳಿಗೂ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ಒಂದೆರಡು ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಆದೇಶಿಸಲಾಯಿತಾದರೂ ಸಿಬಿಐ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಏನನ್ನೂ ಮಾಡಿಲ್ಲ. ಸಿಬಿಐ ಧೋರಣೆ ಬದಲಾಗಬಹುದೆಂದು ನಿರೀಕ್ಷಿಸಿದ್ದೆವು, ಆದರೆ ಹಾಗಾಗಿಲ್ಲ, ಎಂದು ಹೇಳಿದರು.
ಜಾರ್ಖಂಡ್ನ ಧನ್ಬಾದ್ನಲ್ಲಿ ಇತ್ತೀಚೆಗೆ ನ್ಯಾಯಾಧೀಶರೊಬ್ಬರನ್ನು ವಾಹನ ಢಿಕ್ಕಿ ಹೊಡೆಸಿ ಸಾಯಿಸಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಸಿಜೆಐ ಮೇಲಿನಂತೆ ಹೇಳಿದರು.
ಧನಬಾಧ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂದು ಜಾರ್ಖಂಡ್ ಸರಕಾರ ತಿಳಿಸಿದ ನಂತರ ಸುಪ್ರೀಂ ಕೋರ್ಟ್ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಾಧೀಶರುಗಳಿಗೆ ನೀಡಲಾಗುವ ಭದ್ರತೆ ಕುರಿತಾದ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚಿಸಿದೆ.
0 التعليقات: