ಕುಂಭಮೇಳ ವೇಳೆ ಕೋವಿಡ್ ಲ್ಯಾಬ್ಗಳ ವಂಚನೆ ದೃಢ : ತನಿಖಾ ಸಂಸ್ಥೆ
ಹೊಸದಿಲ್ಲಿ: ಉತ್ತರಾಖಂಡದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ನಕಲಿ ಕೋವಿಡ್-19 ಪರೀಕ್ಷೆ ನಡೆಸಿದ ಹಗರಣದಲ್ಲಿ ಹಣದ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಜಾರಿ ನಿರ್ದೇಶನಾಲಯ ಶುಕ್ರವಾರ ಐದು ಡಯಾಗ್ನೋಸ್ಟಿಕ್ ಕಂಪನಿಗಳ ಉನ್ನತ ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಿದೆ.
ಉತ್ತರಾಖಂಡ ಪೊಲೀಸರು ದೂರು ದಾಖಲಿಸಿದ ಬಳಿಕ ಜಾರಿ ನಿರ್ದೇಶನಾಲಯ ತನ್ನ ತನಿಖೆ ಆರಂಭಿಸಿದೆ. ಉತ್ತರಾಖಂಡ ಸರ್ಕಾರ, ಕುಂಭಮೇಳ ವೇಳೆ ಆಂಟಿಜೆನ್ ಟೆಸ್ಟ್ ಮತ್ತು ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಈ ಲ್ಯಾಬ್ಗಳಿಗೆ ಗುತ್ತಿಗೆ ನೀಡಿತ್ತು. ಆದರೆ ಸಾಕಷ್ಟು ಸಂಖ್ಯೆಯ ಪರೀಕ್ಷೆಗಳನ್ನು ನಡೆಸದೇ ನಕಲಿ ಅಂಕಿ ಅಂಶಗಳನ್ನು ಸೃಷ್ಟಿಸಿ ಬಿಲ್ ಮಾಡಿದ್ದರು ಎಂದು ಆಪಾದಿಸಲಾಗಿತ್ತು.
ಒಂದೇ ಮೊಬೈಲ್ ಸಂಖ್ಯೆ, ವಿಳಾಸವನ್ನು ವಿವಿಧ ವ್ಯಕ್ತಿಗಳ ಹೆಸರಿಗೆ ಬಳಸಿ, ವಾಸ್ತವವಾಗಿ ಪರೀಕ್ಷೆ ನಡೆಸದೇ ಕೋವಿಡ್ ಪರೀಕ್ಷಾ ಸಂಖ್ಯೆಯಲ್ಲಿ ಹೆಚ್ಚಳ ತೋರಿಸಿದ್ದರು ಎಂದು ಅಧಿಕಾರಿಗಳು ಹಗರಣದ ಸ್ವರೂಪವನ್ನು ವಿವರಿಸಿದ್ದಾರೆ. ಕೋವಿಡ್ ಪರೀಕ್ಷೆ ಮಾಡಿದವರ ಪಟ್ಟಿಯಲ್ಲಿರುವ ಕೆಲ ವ್ಯಕ್ತಿಗಳು ಕುಂಭಮೇಳಕ್ಕೆ ಆಗಮಿಸಿಯೂ ಇರಲಿಲ್ಲ ಎಂದು ತನಿಖಾ ಏಜೆನ್ಸಿ ಸ್ಪಷ್ಟಪಡಿಸಿದೆ.
ಈ ಲ್ಯಾಬ್ಗಳ ಸುಳ್ಳು ನೆಗೆಟಿವ್ ವರದಿಗಳಿಂದಾಗಿ ಹರಿದ್ವಾರದಲ್ಲಿ ಪಾಸಿಟಿವಿಟಿ ದರ 0.18 ಎಂದು ಬಿಂಬಿಸಲಾಗಿತ್ತು. ವಾಸ್ತವವಾಗಿ ಆಗ ಪಾಸಿಟಿವಿಟಿ ದರ 5.3 ಶೇಕಡ ಇತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಹೀಗೆ ಸೃಷ್ಟಿಸಿದ ನಕಲಿ ದಾಖಲೆಗಳನ್ನು, ಸುಳ್ಳು ಬಿಲ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
0 التعليقات: