Sunday, 15 August 2021

ಅಫ್ಘಾನಿಸ್ತಾನದಿಂದ ಭಾರತೀಯರ ಸ್ಥಳಾಂತರಕ್ಕೆ ಹರಸಾಹಸ


 ಅಫ್ಘಾನಿಸ್ತಾನದಿಂದ ಭಾರತೀಯರ ಸ್ಥಳಾಂತರಕ್ಕೆ ಹರಸಾಹಸ

ಹೊಸದಿಲ್ಲಿ: ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಅಧಿಕಾರಿಗಳು ಮತ್ತು ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತ ಹರಸಾಹಸ ಆರಂಭಿಸಿದೆ.

9/11ರ ಘಟನೆ ಬಳಿಕ ಅಮೆರಿಕದ ಮಿಲಿಟರಿ ದಾಳಿ ನಡೆಸಿ ತಾಲಿಬಾನ್ ಸಂಘಟನೆಯನ್ನು ಅಧಿಕಾರದಿಂದ ಪದಚ್ಯುತಗೊಳಿಸಿ ಎರಡು ದಶಕಗಳ ನಂತರ ತಾಲಿಬಾನ್ ಮತ್ತೆ ದೇಶದ ಚುಕ್ಕಾಣಿ ಹಿಡಿದಿರುವ ಹಿನ್ನೆಲೆಯಲ್ಲಿ ಭಾರತ ಈ ಕ್ರಮಕ್ಕೆ ಮುಂದಾಗಿದೆ. ಬಹುತೇಕ ಎಲ್ಲ ನಗರ ಹಾಗೂ ಪ್ರಾಂತ್ಯಗಳನ್ನು ವಶಪಡಿಸಿಕೊಂಡ ಬಳಿಕ ಅಂತಿಮವಾಗಿ ಕಾಬೂಲ್ ನಗರವನ್ನು ತಾಲಿಬಾನ್ ವಶಪಡಿಸಿಕೊಳ್ಳುವ ಸುಳಿವು ದೊರೆತ ತಕ್ಷಣ ಅಧ್ಯಕ್ಷರು ತಮ್ಮ ನಿಕಟವರ್ತಿಗಳ ಜತೆಗೆ ದೇಶ ತೊರೆದಿದ್ದರು.

ಅಫ್ಘಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಮತ್ತು ಅತಂತ್ರವಾಗಿರುವ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ಭಾರತ ಎಲ್ಲ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಫ್ಘಾನಿಸ್ತಾನದ ಘಟನಾವಳಿಗಳನ್ನು ನಿಕಟವಾಗಿ ವೀಕ್ಷಿಸುತ್ತಿರುವ ಮೂಲಗಳು ಹೇಳಿವೆ.

ಸ್ಥಳಾಂತರ ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ ಮಿಲಿಟರಿ ಸಾರಿಗೆ ವಿಮಾನವನ್ನು ಸನ್ನದ್ಧವಾಗಿ ಇಡಲಾಗಿದೆ ಎಂದು ತಿಳಿದುಬಂದಿದೆ. ರಾಯಭಾರ ಕಚೇರಿ ಸಿಬ್ಬಂದಿ ಮತ್ತು ನಾಗರಿಕರಿಗೆ ಅಪಾಯ ಸಾಧ್ಯತೆ ಎದುರಾಗುವ ಮುನ್ನವೇ ಭಾರತ ತುರ್ತು ಸ್ಥಳಾಂತರಕ್ಕೆ ಕಾರ್ಯಯೋಜನೆಯನ್ನು ಸಿದ್ಧಪಡಿಸಿದೆ ಎಂದು ಹೇಳಲಾಗಿದೆ.


SHARE THIS

Author:

0 التعليقات: