ಅಫ್ಘಾನ್ ಮಹಿಳಾ ಸಂಸದೆಯನ್ನು ವಾಪಸ್ ಕಳುಹಿಸಿದ ಪ್ರಕರಣ: ಉದ್ದೇಶಪೂರ್ವಕವಲ್ಲದ ತಪ್ಪು ಎಂದ ಕೇಂದ್ರ ಸರ್ಕಾರ
ಹೊಸದಿಲ್ಲಿ: ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಸ್ಟ್ 20ರಂದು ಅಫ್ಘಾನಿಸ್ತಾನದ ಮಹಿಳಾ ಸಂಸದೆಯೊಬ್ಬರನ್ನು ವಾಪಸ್ ಕಳುಹಿಸಿದ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಇದೊಂದು ಉದ್ದೇಶಪೂರ್ವಕವಲ್ಲದ ತಪ್ಪು ಎಂದು ಹೇಳಿದೆ.
ಅಷ್ಟೇ ಅಲ್ಲದೆ ಅಫ್ಘಾನಿಸ್ತಾನದ ವೊಲೆಸಿ ಜಿರ್ಗಾ ಕ್ಷೇತ್ರದ ಸಂಸದೆಯಾಗಿರುವ ರಂಗೀನಾ ಕರ್ಗರ್ ಅವರನ್ನು ಸಂಪರ್ಕಿಸಿರುವ ಸರ್ಕಾರ ನಡೆದಿರುವುದಕ್ಕೆ ಕ್ಷಮೆಯನ್ನೂ ಕೇಳಿದೆಯಲ್ಲದೆ ತುರ್ತು ವೀಸಾಗೆ ಅರ್ಜಿ ಸಲ್ಲಿಸುವಂತೆಯೂ ಆಕೆಗೆ ತಿಳಿಸಿದೆ ಎಂದು indianexpress.com ವರದಿ ಮಾಡಿದೆ.
ಅಫ್ಘಾನಿಸ್ತಾನದ ಸ್ಥಿತಿ ಕುರಿತು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡ ನಂತರ ಮೇಲಿನ ಬೆಳವಣಿಗೆ ನಡೆದಿದೆ.
"ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿರುವ ಹಾಗೂ ಭಾರತಕ್ಕೆ ಆಗಾಗ ಭೇಟಿ ನೀಡುತ್ತಿರುವ ರಾಜಕೀಯ ನಾಯಕರೊಬ್ಬರ ವಿರುದ್ಧ ವಿದೇಶಾಂಗ ಸಚಿವಾಲಯ ಇಂತಹ ಕ್ರಮ ಹೇಗೆ ಕೈಗೊಂಡಿತು?,'' ಎಂದು ನಾಯಕರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಸಭೆಯಲ್ಲಿ ಪ್ರಶ್ನಿಸಿದರು.
ಗೊಂದಲವಿದ್ದ ಕಾರಣ ಹಾಗೂ ಭಾರತೀಯ ವೀಸಾಗಳಿದ್ದ ಕೆಲ ಪಾಸ್ಪೋರ್ಟ್ಗಳನ್ನು ತಾಲಿಬಾನಿಗಳು ಸೆಳೆದಿದ್ದಾರೆಂಬ ಸುದ್ದಿಗಳ ಹಿನ್ನೆಲೆಯಲ್ಲಿ ಇಂತಹ ಒಂದು ಉದ್ದೇಶಪೂರ್ವಕವಲ್ಲದ ತಪ್ಪು ಸಂಭವಿಸಿದೆ ಎಂದು ಸಭೆಯಲ್ಲಿ ಸರ್ಕಾರ ಸ್ಪಷ್ಟೀಕರಣ ನೀಡಿದೆ.
ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಜೆ ಪಿ ಸಿಂಗ್ ಅವರು ರಂಗೀನಾ ಅವರನ್ನು ಸಂಪರ್ಕಿಸಿ ಕ್ಷಮೆ ಕೇಳಿ ತುರ್ತು ಇ-ವೀಸಾಗೆ ಅರ್ಜಿ ಸಲ್ಲಿಸುವಂತೆ ಹೇಳಿದ್ದಾರೆ ಎಂದು ಆಕೆ ತಿಳಿಸಿದ್ದಾರೆ.
ಆಗಸ್ಟ್ 20ರಂದು ಇಸ್ತಾಂಬುಲ್ನಿಂದ ದುಬೈ ಮೂಲಕ ಆಗಮಿಸಿದ್ದ ರಂಗೀನಾ ಅವರನ್ನು ವಿಮಾನ ನಿಲ್ದಾಣದಲ್ಲಿ 16 ಗಂಟೆಗಳ ಕಾಯಿಸಿದ್ದ ಅಧಿಕಾರಿಗಳು ಅವರನ್ನು ಮತ್ತೆ ಅದೇ ವಿಮಾನದಲ್ಲಿ ಇಸ್ತಾಂಬುಲ್ಗೆ ವಾಪಸ್ ಕಳುಹಿಸಿದ್ದರು.
0 التعليقات: