Wednesday, 11 August 2021

ದೇಶದಾದ್ಯಂತ ʼಜನಾಶೀರ್ವಾದ ಯಾತ್ರೆʼ ಮೂಲಕ ಬೃಹತ್‌ ರ್ಯಾಲಿಗಳನ್ನು ಕೈಗೊಳ್ಳಲಿರುವ ಬಿಜೆಪಿ: ವರದಿ


 ದೇಶದಾದ್ಯಂತ ʼಜನಾಶೀರ್ವಾದ ಯಾತ್ರೆʼ ಮೂಲಕ ಬೃಹತ್‌ ರ್ಯಾಲಿಗಳನ್ನು ಕೈಗೊಳ್ಳಲಿರುವ ಬಿಜೆಪಿ: ವರದಿ

ಹೊಸದಿಲ್ಲಿ:ನೂತನವಾಗಿ ಆಯ್ಕೆಯಾದ ಕೇಂದ್ರ ಸಚಿವರನ್ನು ಪರಿಚಯಿಸಲು ಬಿಜೆಪಿಯು ದೇಶದಾದ್ಯಂತ ಬೃಹತ್‌ ರ್ಯಾಲಿಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ ಎಂದು ndtv.com ವರದಿ ಮಾಡಿದೆ. ಆಗಸ್ಟ್‌ 16ರಿಂದ ರ್ಯಾಲಿಗಳು ಪ್ರಾರಂಭವಾಗಲಿದ್ದು 22 ರಾಜ್ಯಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿದ್ದಾಗಿ ವರದಿ ತಿಳಿಸಿದೆ.

ಸಚಿವ ಸಂಪುಟದಲ್ಲಿ ಸೇರ್ಪಡೆಗೊಂಡ 39 ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲಿದ್ದು, 19,567ಕಿ,ಮೀಗಳಷ್ಟು ಈ ಯಾತ್ರೆ ಹಾದುಹೋಗಲಿದೆ. 22 ರಾಜ್ಯಗಳಲ್ಲಿ ಕಾರ್ಯಕ್ರಮ, ಬೃಹತ್‌ ರ್ಯಾಲಿಗಳನ್ನು ಆಯೋಜಿಸಲಾಗಿದೆ 215 ಲೋಕಸಭಾ ಕ್ಷೇತ್ರಗಳ 265 ಜಿಲ್ಲೆಗಳನ್ನು ಒಳಗೊಳ್ಳಲಿದೆ. ಒಟ್ಟು 1,663 ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ ಎಂದು ಮೂಗಳು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.

"ಮಂತ್ರಿಗಳು ಮನೆಗೆ ಹೋಗುವ ಮುನ್ನ ಜನರ ಬಳಿ ಹೋಗಬೇಕು" ಎಂದು ಪ್ರಧಾನಿ ಮೋದಿ ಹೇಳಿದ್ದನ್ನು ಮೂಲಗಳು ಉಲ್ಲೇಖಿಸಿವೆ. ಸ್ವಾತಂತ್ರ್ಯ ದಿನಾಚರಣೆಯವರೆಗೂ ದಿಲ್ಲಿಯಲ್ಲೇ ಇರಲು ಪ್ರಧಾನಿ ಹೇಳಿರುವ ಕಾರಣದಿಂದ ನೂತನ ಸಚಿವರು ಕಳೆದ ತಿಂಗಳು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಮ್ಮ ಮನೆಗೆ ತೆರಳಲ್ಲ ಎಂದು ತಿಳಿದು ಬಂದಿದೆ.

ಮುಂಬರುವ ರ್ಯಾಲಿಗೆ ತಯಾರಿಯೆಂಬಂತೆ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ನೂತನ ಸಚಿವರನ್ನು ಭೇಟಿ ಮಾಡಲು ಆರಂಭಿಸಿದ್ದಾರೆ. ಮಂಗಳವಾರ 9 ಸಚಿವರನ್ನು ಹಾಗೂ ಬುಧವಾರ 11 ಸಚಿವರನ್ನು ಅವರು ಭೇಟಿಯಾಗಿದ್ದಾರೆ. ರ್ಯಾಲಿಯಲ್ಲಿ 19 ರಾಜ್ಯಗಳ ಸಚಿವರು ಭಾಗವಹಿಸಲಿದ್ದಾರೆ.

ಕೇಂದ್ರ ಸಚಿವಾಲಯದ ಕಿರಿಯ ಮಂತ್ರಿಗಳು ಆಗಸ್ಟ್‌ 16ರಿಂದ ಯಾತ್ರೆ ಆರಂಭಿಸಲಿದ್ದು, ನಾಲ್ಕು ದಿನಗಳ ಬಳಿಕ ಕ್ಯಾಬಿನೆಟ್‌ ಸಚಿವರು ಬಂದು ಸೇರಲಿದ್ದಾರೆ ಎಂದು ವರದಿ ತಿಳಿಸಿದೆ.


SHARE THIS

Author:

0 التعليقات: