Monday, 9 August 2021

ದೊಡ್ಡಬಳ್ಳಾಪುರ: ವಿದ್ಯುತ್‌ ಖಾಸಗೀಕರಣಕ್ಕೆ ವಿರೋಧ


ದೊಡ್ಡಬಳ್ಳಾಪುರ: ವಿದ್ಯುತ್‌ ಖಾಸಗೀಕರಣಕ್ಕೆ ವಿರೋಧ

ದೊಡ್ಡಬಳ್ಳಾಪುರ: 'ಎಲ್ಲಾ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಆತುರದಲ್ಲಿ ಕೃಷಿ ಕಾಯ್ದೆಗಳ ತಿದ್ದುಪಡಿ ಹಾಗೂ ವಿದ್ಯುತ್‌ ಖಾಸಗೀಕರಣದಿಂದ ದೇಶದ ದುಡಿಯುವ ವರ್ಗ ಬೀದಿಗೆ ಬರುವಂತಾಗಿದೆ. ಈ ಕರಾಳ ಕಾಯ್ದೆಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ' ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್‌. ಚಂದ್ರತೇಜಸ್ವಿ ಹೇಳಿದರು.

ಐತಿಹಾಸಿಕ ಕ್ವಿಟ್‌ ಇಂಡಿಯಾ ಚಳವಳಿ ನೆನಪಿನಲ್ಲಿ ನಡೆಸುತ್ತಿರುವ ಕಾರ್ಪೋರೇಟ್‌ ಕಂಪನಿಗಳೇ ದೇಶ ಬಿಟ್ಟು ತೊಲಗಿ ಹೋರಾಟದ ಅಂಗವಾಗಿ ಸೋಮವಾರ ತಾಲ್ಲೂಕು ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅಗ್ಗದ ಬೆಲೆಗೆ ತೈಲ ಖರೀದಿಸುವ ಕೇಂದ್ರ ಸರ್ಕಾರ ಬೇಕಾಬಿಟ್ಟಿಯಾಗಿ ತೆರಿಗೆ ವಿಧಿಸುವುದರಿಂದ ಬಡವರು ಬದುಕುವುದೇ ದುಸ್ತರವಾಗಿದೆ. ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿ ಯಾರೊಬ್ಬರು ಹೊರಗೆ ಬರದಂತೆ ನಿಯಮ ಜಾರಿಗೆ ತಂದು ತಮಗೆ ಬೇಕಾದ ಕಾಯ್ದೆಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ನೀತಿಗಳು ಪ್ರಜಾಪ್ರಭುತ್ವದ ವಿರೋಧಿಯಾಗಿವೆ ಎಂದು ದೂರಿದರು.

ರಾಜ್ಯ ಸರ್ಕಾರ ಶ್ರೀಮಂತರಿಗೆ ಅನುಕೂಲವಾಗುವಂತಹ ಭೂ ಸುಧಾರಣೆ ನೀತಿಯಿಂದ ಕೃಷಿ ಭೂಮಿ ಉಳ್ಳವರ ಪಾಲಾಗುತ್ತಿದೆ. ಬಡ ರೈತರು ಸಾಗುವಳಿ ಮಾಡುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಲು ಮಾತ್ರ ಸರ್ಕಾರ ನೂರೆಂಟು ನೆಪ ಹೇಳುತ್ತಲೇ ಕಾಲ ಕಳೆಯುತ್ತಿದೆ ಎಂದು ದೂರಿದರು.

ವಿದ್ಯುತ್‌ ಖಾಸಗೀಕರಣವಾದ ನಂತರ ಎಲ್ಲಾ ಗೃಹ ಬಳಕೆ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರೀಪೇಯ್ಡ್‌ ಮೀಟರ್‌ ಅಳವಡಿಸಲಿದ್ದಾರೆ. ಮುಂಗಡವಾಗಿಯೇ ಹಣ ನೀಡಿ ವಿದ್ಯುತ್‌ ಬಳಸುವ ಶಕ್ತಿ ದೇಶದಲ್ಲಿ ಎಷ್ಟು ಜನರಿಗೆ ಸಾಧ್ಯವಾಗಲಿದೆ ಎನ್ನುವ ಪ್ರಶ್ನೆಗೆ ಸರ್ಕಾರದ ಬಳಿಯೇ ಉತ್ತರ ಇಲ್ಲದಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ಆರ್‌. ರುದ್ರಾರಾಧ್ಯ, ಪಿ.ಎ. ವೆಂಕಟೇಶ್‌, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್‌, ಕಾರ್ಯದರ್ಶಿ ಸಿ.ಎಚ್‌. ರಾಮಕೃಷ್ಣಯ್ಯ, ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಮುಖಂಡರಾದ ನಳಿನಾಕ್ಷಿ, ಗ್ರಾಮ ಪಂಚಾಯಿತಿ ಸದಸ್ಯ ಸಿ.ಎಸ್‌. ಧರ್ಮೇಂದ್ರ, ಸದಾಶಿವಮೂರ್ತಿ, ನರಸಿಂಹರಾಜು ಹಾಜರಿದ್ದರು.SHARE THIS

Author:

0 التعليقات: