Tuesday, 10 August 2021

ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ: ರಾಮಲಿಂಗಾರೆಡ್ಡಿ


 ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ: 
ರಾಮಲಿಂಗಾರೆಡ್ಡಿ

ಬೆಂಗಳೂರು, ಆ.10: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇಂದಿರಾ ಗಾಂಧಿ ಹೆಸರನ್ನು ಇಂದಿರಾ ಕ್ಯಾಂಟೀನ್ ಯೋಜನೆ ಹೆಸರಿಂದ ಬದಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ಮಾಡಿದ್ದು, ಅದಕ್ಕೆ ನಮ್ಮ ಪಕ್ಷದಿಂದ ಹೋದವರು ಅದನ್ನು ಬೆಂಬಲಿಸಿದ್ದಾರೆ. ಅವರು ಬೇರೆ ಯಾವುದಾದರೂ ಹೆಸರನ್ನು ಇಡಬೇಕು ಅಂದುಕೊಂಡಿದ್ದರೆ, ಇನ್ನು ಉತ್ತಮವಾದ ದೊಡ್ಡ ಯೋಜನೆ ತಂದು ಅದಕ್ಕೆ ಅವರಿಗೆ ಬೇಕಾದ ಹೆಸರು ಇಡಲಿ. ಆದರೆ, ಇಂದಿರಾ ಗಾಂಧಿ ಹೆಸರು ತೆಗೆದು ಬೇರೆ ಹೆಸರಿಡುತ್ತೇವೆ ಎಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ  ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಟಲ್ ಸಾರಿಗೆ, ದೀನದಯಾಳ್ ಉಪಾಧ್ಯಾಯ ಹೆಸರನ್ನು ಯಶವಂತಪುರ ಫ್ಲೈಓವರ್, ಸಾರ್ವಕರ್ ಹೆಸರನ್ನು ಯಲಹಂಕ ಫ್ಲೈ ಓವರ್ ಗೆ ಇಟ್ಟಿದ್ದಾರೆ. ಇಂದಿರಾ ಗಾಂಧಿ ಹೆಸರನ್ನು ಬದಲಿಸುವುದಾದರೆ ಇದನ್ನೂ ಬದಲಿಸಿ. ಇಲ್ಲದಿದ್ದರೆ, ನಾವು ಈ ಎಲ್ಲ ಯೋಜನೆ ಹೆಸರುಗಳಿಗೆ ಮಸಿ ಬಳಿಯಬೇಕಾಗುತ್ತದೆ ಎಂದರು.

ಜವಾಬ್ದಾರಿ ಸ್ಥಾನದಲ್ಲಿರುವವರು ಗೌರವಯುತವಾಗಿ ನಡೆದುಕೊಳ್ಳಬೇಕು. 16 ವರ್ಷ ಪ್ರಧಾನಮಂತ್ರಿಯಾದವರಿಗೆ ಅಗೌರವ ತರಲು ಪ್ರಯತ್ನಿಸಿದರೆ ನಾವು ಅದೇ ದಾಟಿಯಲ್ಲಿ ಅವರಿಗೆ ಉತ್ತರ ಕೊಡಬೇಕಾಗುತ್ತದೆ. ಬಿಜೆಪಿ ನಾಯಕರು, ಮಾತನಾಡುವಾಗ, ಟ್ವೀಟ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದವರು. ಅವರೂ ಕೂಡ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಿದ್ದಕ್ಕೆ ಅವರು ಪ್ರಾಣ ಕಳೆದುಕೊಂಡರು. ಅಂತಹವರ ಹೆಸರನ್ನು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಖೇಲ್ ರತ್ನ ಪ್ರಶಸ್ತಿಗೆ ಇಟ್ಟಿದ್ದರು. ಹಿಂದೆ ಹಾಕಿಯಲ್ಲಿ ಹೆಸರು ಮಾಡಿದ್ದ ಧ್ಯಾನ್ ಚಂದ್ ಅವರ ಹೆಸರನ್ನು ಇನ್ನು ದೊಡ್ಡ ಯೋಜನೆ ತಂದು ಅದಕ್ಕೆ ಅವರ ಹೆಸರನ್ನು ಇಡಲಿ ಎಂದು ಅವರು ಹೇಳಿದರು.

ಧ್ಯಾನ್ ಚಂದ್ ಅವರು ವಿಶ್ವ ಕಂಡ ಶ್ರೇಷ್ಠ ಹಾಕಿ ಆಟಗಾರ. ಕ್ರೀಡಾ ಪ್ರಶಸ್ತಿಗೆ ಕ್ರೀಡಾಪಟುವಿನ ಹೆಸರಿಡುವ ಉದ್ದೇಶ ನಿಜವೇ ಆಗಿದ್ದರೆ, ರಾಜೀವ್ ಗಾಂಧಿ ಅವರ ಹೆಸರು ಬದಲಿಸುವ ಬಿಜೆಪಿಯವರು ಗುಜರಾತಿನಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಹೆಸರಿನ ಕ್ರಿಕೆಟ್ ಕ್ರೀಡಾಂಗಣಕ್ಕೆ ಈಗ ಮೋದಿ ಅವರ ಹೆಸರನ್ನೇ ಇಟ್ಟುಕೊಂಡಿದ್ದಾರೆ. ಹಾಗಾದರೆ ಮೋದಿ ಅವರು ಕ್ರೀಡಾಪಟುವೇ? ಕ್ರಿಕೆಟ್ ಆಟಗಾರನಾ? ಸಚಿನ್ ಅವರಂತೆ 100 ಶತಕ ದಾಖಲಿಸಿದ್ದಾರಾ? 500 ವಿಕೆಟ್ ತೆಗೆದಿದ್ದಾರಾ? 300 ಕ್ಯಾಚ್ ಹಿಡಿದಿದ್ದಾರಾ? ಯಾವ ಕಾರಣಕ್ಕೆ ಇಟ್ಟುಕೊಂಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ಇನ್ನು ದಿಲ್ಲಿಯ ಫಿರೋಝ್ ಶಾ ಮೈದಾನಕ್ಕೆ ಅರುಣ್ ಜೇಟ್ಲಿ ಹೆಸರಿಟ್ಟಿದ್ದಾರೆ. ಅವರು ದೊಡ್ಡ ಕ್ರಿಕೆಟ್ ಅಭಿಮಾನಿ ಅದರಲ್ಲಿ ಎರಡು ಮಾತಿಲ್ಲ. ಅವರು ರಣಜಿ ಆಡಿದ್ದರಾ? ಅವರು ಎಷ್ಟು ಶತಕ ಬಾರಿಸಿದ್ದಾರೆ. ಕ್ರೀಡಾಂಗಣಗಳಿಗೆ ಇವರ ಹೆಸರುಗಳನ್ನು ಇವರೇ ಇಟ್ಟುಕೊಳ್ಳಬಹುದು. ಆದರೆ, ದೇಶಕ್ಕಾಗಿ ಪ್ರಾಣ ಬಿಟ್ಟ ಮಾಜಿ ಪ್ರಧಾನಮಂತ್ರಿಗಳ ಹೆಸರು ಇಡಬಾರದಾ? ಅವರ ಹೆಸರು ಬದಲಿಸಲು ನಾಚಿಕೆಯಾಗುವುದಿಲ್ಲವೇ?  ಭವಿಷ್ಯದಲ್ಲಿ ಬಿಜೆಪಿ ಸರಕಾರ ರಾಜ್ಯ ಹಾಗೂ ಕೇಂದ್ರದಲ್ಲಿ ಇರುವುದಿಲ್ಲ. ಆಗ ಅವರು ಇಟ್ಟ ಹೆಸರು ನಾವು ಕಿತ್ತುಹಾಕುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಸರಕಾರ ಇದ್ದಾಗ ಇಂದಿರಾ ಕ್ಯಾಂಟೀನ್‍ನಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿತ್ತು. ಅದನ್ನು ಉಳಿಸಿಕೊಂಡು ಹೋಗುವುದು ಸರಕಾರದ ಜವಾಬ್ದಾರಿ. ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ನಾಯಕರು. ಸ್ವಾತಂತ್ರ್ಯಕ್ಕಾಗಿ ಆರೂವರೆ ಲಕ್ಷ ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಕೋಟ್ಯಂತರ ಆಸ್ತಿ ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ಹೆಸರನ್ನು ಇಡಲಾಗಿದೆ. ಆದರೆ ಬಿಜೆಪಿಯವರು ಅಂತಹ ಯಾವುದೇ ಕೆಲಸ ಮಾಡಿಲ್ಲ. ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ, ಈ ಹೋರಾಟವನ್ನು ದಮನ ಮಾಡುವ ಕೆಲಸ ಮಾಡಿದ್ದರು ಎಂದು ರಾಮಲಿಂಗಾರೆಡ್ಡಿ ದೂರಿದರು.

ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರದಲ್ಲಿ ತ್ಯಾಗ ಮಾಡಿದ ನಾಯಕರ ಹೆಸರನ್ನು ಅಳಿಸುವ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡುತ್ತಿದೆ. ಬಿಜೆಪಿಯವರು ತಾವು ಗೇಮ್ ಚೇಂಜರ್ ಎಂದು ಅಧಿಕಾರಕ್ಕೆ ಬಂದರು. ರಾಷ್ಟ್ರದಲ್ಲಿ 70 ವರ್ಷಗಳ ಕಾಲ ಕಾಂಗ್ರೆಸ್ ಏನು ಮಾಡಿಲ್ಲ, ಹೀಗಾಗಿ ನಾವು ಗೇಮ್ ಚೇಂಜರ್ಸ್ ಆಗುತ್ತೇವೆ ಎಂದರು. ಆದರೆ ಅವರು ಏನೂ ಮಾಡದೇ ಕೇವಲ ಹೆಸರು ಬದಲಿಸುತ್ತಾ ನೇಮ್ ಚೇಂಜರ್ಸ್ ಆಗುತ್ತಿದ್ದಾರೆ ಎಂದು ಟೀಕಿಸಿದರು.

ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅಥವಾ ಮಹಾತ್ಮಾ ಗಾಂಧಿ ಅವರಾಗಲಿ ಅವರ ಹೆಸರು ಬದಲಿಸಬಹುದು. ಆದರೆ ಈ ದೇಶದ ಮಣ್ಣಲ್ಲಿ ಅವರ ರಕ್ತ ಬೆರೆತಿದೆ. ಅದನ್ನು ಅಳಿಸಲು ಇವರಿಂದ ಸಾಧ್ಯವಿಲ್ಲ. ಇವರು ಯಾರೂ ಸ್ವಾರ್ಥಕ್ಕಾಗಿ ಪ್ರಾಣ ಬಿಟ್ಟವರಲ್ಲ ಎಂದು ಹರಿಪ್ರಸಾದ್ ಹೇಳಿದರು.

ಬಿಜೆಪಿ ಸರಕಾರ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ವಿಮಾನ ನಿಲ್ದಾಣ ಅಂತಾ ಬದಲಿಸಿದ್ದಾರೆ. ಆದರೆ ರಾಷ್ಟ್ರಕ್ಕೆ ಬಲಿದಾನ ಮಾಡಿದವರ ಹೆಸರು ಬದಲಿಸಲು ಹೊರಟಿದ್ದಾರೆ. ರಾಷ್ಟ್ರದ್ರೋಹದ ಆಪಾದನೆ ಇರುವ ಸಾವರ್ಕರ್ ಅವರ ಹೆಸರಿಗೆ ನಾವು ಮಸಿ ಬಳಿಯುತ್ತೇವೆ. ಪೆಟ್ರೋಲ್ ಬೆಲೆ, ರೈತರ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಕುತಂತ್ರ ನಡೆಸುತ್ತಿದೆ. ಇದಕ್ಕೆ ನಾವು ತಲೆಬಾಗಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ರಾಜೀವ್ ಗಾಂಧಿ ತಮ್ಮ ಅಧಿಕಾರ ಅವಧಿಯಲ್ಲೇ ಧ್ಯಾನ್ ಚಂದ್ ಅವರ ಹೆಸರಲ್ಲಿ ಶ್ರೇಷ್ಠ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮ ಆರಂಭಿಸಿದ್ದರು. ನಮ್ಮ ನಾಯಕರು ಸತ್ತ ಮೇಲೆ ನಾವು ಕಾರ್ಯಕ್ರಮಗಳಿಗೆ ಅವರ ಹೆಸರಿಡುತ್ತೇವೆ. ಆದರೆ ಮೋದಿ ಬದುಕಿರುವಾಗಲೇ ಸರ್ದಾರ್ ಪಟೇಲ್ ಅವರ ಹೆಸರು ತೆಗೆದು ತಮ್ಮ ಹೆಸರನ್ನು ಕ್ರಿಕೆಟ್ ಕ್ರೀಡಾಂಗಣಕ್ಕೆ ಇಟ್ಟುಕೊಂಡಿದ್ದಾರೆ. ಪಟೇಲ್ ಉಕ್ಕಿನ ಮನುಷ್ಯ. ನೀವು ಬೇಕಾದರೆ ಗೋಲ್ಡನ್ ಪುರುಷ, ಡೈಮಂಡ್ ಪುರುಷ ಅಂತಲೇ ಕರೆಸಿಕೊಳ್ಳಿ. ಆದರೆ ಸರ್ದಾರ್ ಪಟೇಲರಂತೆ ನೀವು ಉಕ್ಕಿನ ಮನುಷ್ಯರಾಗಲು ಸಾಧ್ಯವಿಲ್ಲ. ಹೆಸರು ಬದಲಾವಣೆ ಮಾಡುವ ಮೂಲಕ ಬಿಜೆಪಿ ಹೀನ ಕುತಂತ್ರ ನಡೆಸುತ್ತಿದೆ ಎಂದು ಅವರು ಕಿಡಿಗಾರಿದರು.

ಬಿಜೆಪಿ ಸರಕಾರ ಯಾವುದೇ ವಿಚಾರದಲ್ಲೂ ಒಳ್ಳೆಯ ಕಾರ್ಯಕ್ರಮ ನೀಡಲು ಸಾಧ್ಯವಿಲ್ಲ. ಅವರು ಸಂಪೂರ್ಣ ವಿಫಲರಾಗಿದ್ದು, ಪೆಟ್ರೋಲ್ ಬೆಲೆ, ಪೆಗಾಸಸ್‍ನಂತಹ ಗಂಭೀರ ವಿಚಾರಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹರಿಪ್ರಸಾದ್ ಹೇಳಿದರು.SHARE THIS

Author:

0 التعليقات: