ಒಂದು ಕೋವಿಡ್ ಪ್ರಕರಣ ವರದಿಯಾಗುತ್ತಲೇ ಇಡೀ ದೇಶದಲ್ಲಿ ಲಾಕ್ಡೌನ್ ಘೋಷಿಸಿದ ನ್ಯೂಜಿಲೆಂಡ್ ಪ್ರಧಾನಿ
ವೆಲ್ಲಿಂಗ್ಟನ್, ಆ.17: ನ್ಯೂಜಿಲೆಂಡ್ ನ ಅತ್ಯಂತ ದೊಡ್ಡ ನಗರವಾದ ಆಕ್ಲೆಂಡ್ನಲ್ಲಿ ಕಳೆದ ಆರು ತಿಂಗಳ ನಂತರ ಕೋವಿಡ್-19 ಸೋಂಕಿನ ಒಂದು ಪ್ರಕರಣ ವರದಿಯಾಗುತ್ತಲೇ ಅಲ್ಲಿನ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಅವರು ದೇಶಾದ್ಯಂತ ಕಠಿಣ ಲಾಕ್ಡೌನ್ ನಿಯಮಗಳನ್ನು ಜಾರಿಗೊಳಿಸಿದ್ದಾರೆ.
ಬುಧವಾರದಿಂದ ಆರಂಭಗೊಂಡು ಮೂರು ದಿನಗಳ ಕಾಲ ಇಡೀ ನ್ಯೂಜಿಲೆಂಡ್ನಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಾಗಲಿದ್ದರೆ, ಸೋಂಕಿತ ವ್ಯಕ್ತಿ ಇದ್ದ ಆಕ್ಲೆಂಡ್ ಮತ್ತು ಕೊರೊಮಂಡೆಲ್ನಲ್ಲಿ ಏಳು ದಿನಗಳ ಲಾಕ್ ಡೌನ್ ಇರಲಿದೆ.
ಈ ನಾಲ್ಕನೇ ಹಂತದ ಕಠಿಣ ಲಾಕ್ ಡೌನ್ ನಿಯಮಗಳನ್ವಯ ಶಾಲೆಗಳು, ಕಚೇರಿಗಳು ಹಾಗೂ ಎಲ್ಲಾ ಉದ್ದಿಮೆಗಳು ಬಂದ್ ಆಗಲಿವೆ ಹಾಗೂ ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿಯಿರಲಿದೆ. ಹೊಸ ಕೋವಿಡ್ ಪ್ರಕರಣ ಡೆಲ್ಟಾ ರೂಪಾಂತರಿ ಸೋಂಕು ಇರಬಹುದೆಂಬ ಶಂಕೆಯಿದೆ ಆದರೆ ಅದು ದೃಢಪಟ್ಟಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ನ್ಯೂಜಿಲೆಂಡ್ನಲ್ಲಿ ಕೊನೆಯ ಬಾರಿ ಫೆಬ್ರವರಿಯಲ್ಲಿ ಕೋವಿಡ್ ಪ್ರಕರಣ ವರದಿಯಾಗಿತ್ತು.
0 التعليقات: