Friday, 13 August 2021

ವಿದ್ಯುತ್ ಕಾಯ್ದೆ ತಿದ್ದುಪಡಿ: ಜನರ ತಲೆಗೆ ಚಪ್ಪಡಿ!


ವಿದ್ಯುತ್ ಕಾಯ್ದೆ ತಿದ್ದುಪಡಿ: ಜನರ ತಲೆಗೆ ಚಪ್ಪಡಿ!

*"ಜನರೆಂದರೆ ದೇಶ, ಜನದ್ರೋಹವೆಂಬುದು ನಿಜವಾದ ದೇಶದ್ರೋಹ. ಜನರಿಗೆ ದ್ರೋಹ ಮಾಡಿ ಕಾರ್ಪೊರೇಟ್ ಬಂಡವಾಳಿಗರ ಪರ ನಿಲ್ಲುವುದು ದೇಶ ಪ್ರೇಮವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಬಲವಂತವಾಗಿ ದೇಶದ ಮೇಲೆ ಹೇರಲು ಹೊರಟಿರುವ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂದೆಗೆದುಕೊಳ್ಳಬೇಕು."*

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು;

ದೇಶದ ಜನ ಕಳೆದ ಒಂದೂವರೆ ವರ್ಷದಿಂದ ಕೊರೋನ ಸೋಂಕಿನದಾಳಿಗೆ ಸಿಲುಕಿ ಅಪಾರ ಸಾವು-ನೋವು ಗಳನ್ನು ಅನುಭವಿಸುತ್ತಿದ್ದಾರೆ. ಕೊರೋನಗಿಂತಲೂ ಹೆಚ್ಚಾಗಿ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಸುಗ್ರೀವಾಜ್ಞೆಗಳು ಹಾಗೂ ಅಪ್ರಜಾತಾಂತ್ರಿಕ ಮಾರ್ಗಗಳ ಮೂಲಕ ದೇಶವಾಸಿಗಳ ಮೇಲೆ ಹೇರಿಕೆ ಮಾಡುತ್ತಿರುವ ಕಾಯ್ದೆ, ಕಾನೂನುಗಳು ಜನರ ಪಾಲಿಗೆ ಕಾರ್ಕೋಟಕ ವಿಷವಾಗುತ್ತಿವೆ. ಕಾರ್ಪೊರೇಟ್ ಬಂಡವಾಳಿಗರಿಗೆ ಹೋಳಿಗೆಯಾಗುತ್ತಿವೆ. ರಾಜ್ಯ ಸರಕಾರವೂ ತಾನೇನೂ ಕಮ್ಮಿ ಇಲ್ಲ ಎಂಬಂತೆ ರಿಯಲ್ ಎಸ್ಟೇಟ್‌ದಾರರಿಗೆ, ಬಂಡವಾಳಿಗರಿಗೆ ಅನುಕೂಲವಾಗುವ ಕಾನೂನುಗಳನ್ನು ಜಾರಿಗೆ ತರುತ್ತಿವೆ. ಕೇಂದ್ರ-ರಾಜ್ಯಗಳಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರಗಳು ಜನರ ಬೆನ್ನಿಗೊಬ್ಬರು ಇರಿದರೆ, ಹೃದಯಕ್ಕೆ ಮತ್ತೊಬ್ಬರು ಇರಿಯುತ್ತಿದ್ದಾರೆ.

ಕಳೆದ ವರ್ಷ ದೇಶದ ಜನರ ಮೇಲೆ ಹೇರಲು ಹೊರಟ ಕಾಯ್ದೆಗಳಲ್ಲಿ ವಿದ್ಯುತ್ ಕಾಯ್ದೆ ತಿದ್ದುಪಡಿ-2020 ಕೂಡ ಒಂದು. ರೈತರು ಪ್ರಬಲ ವಿರೋಧ ಮಾಡಿದ ಕಾರಣಕ್ಕಾಗಿ ಈ ಕಾಯ್ದೆಯನ್ನು ಇದುವರೆಗೆ ತಡೆಹಿಡಿಯಲಾಗಿತ್ತು. ಆದರೆ ಈಗ ಕಾಯ್ದೆಯನ್ನು ಬಲವಂತವಾಗಿ ಅಂಗೀಕರಿಸಲು ಕೇಂದ್ರ ಸರಕಾರ ಮುಂದಾಗಿದೆ. ಈ ಕಾಯ್ದೆಯನ್ನೇನಾದರೂ ಅಂಗೀಕರಿಸಿದ್ದೇ ಆದರೆ ದೇಶ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಪರಿಸ್ಥಿತಿ ಹೀಗಿದ್ದರೂ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ.

ಮೋದಿಯವರು ತರಲು ಹೊರಟಿರುವ ವಿದ್ಯುತ್ ಕಾಯ್ದೆ ಪ್ರಕಾರ;

► ವಿದ್ಯುತ್ ಉತ್ಪಾದನೆ, ಸರಬರಾಜು ಮತ್ತು ವಿತರಣೆಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತದೆ.

► ಖಾಸಗಿಯವರಿಗೆ ಲಾಭ ಮಾಡಿಕೊಡುವುದಕ್ಕಾಗಿ ಸೆಕ್ಷನ್ 3ರ ಪ್ರಕಾರ ‘ಇಲೆಕ್ಟ್ರಿಸಿಟಿ ಕಾಂಟ್ರಾಕ್ಟ್ ಎನ್‌ಫೊರ್ಸ್‌ಮೆಂಟ್ ಅಥಾರಿಟಿ’ಯನ್ನು ಜಾರಿಗೆ ತರಲಾಗುತ್ತದೆ.

► ಸೆಕ್ಷನ್ 7ರ ಪ್ರಕಾರ ಹಣ ಕೊಡದೆ, ಭದ್ರತೆ ನೀಡದೆ ಯಾವುದೇ ಕಾರಣಕ್ಕೂ ವಿದ್ಯುತ್ ಸರಬರಾಜು ಮಾಡಬಾರದೆಂದು ಈ ಕಾಯ್ದೆ ಹೇಳುತ್ತದೆ.

►ಸೆಕ್ಷನ್ 12ರ ಪ್ರಕಾರ ಸಬ್ಸಿಡಿಗಳನ್ನು ಕಡಿತ ಮಾಡಬೇಕೆಂದು ಹೇಳುತ್ತದೆ.

► ಸೆಕ್ಷನ್ 5ರ ಪ್ರಕಾರ ವಿದ್ಯುತ್ ಸರಬರಾಜುದಾರರು ರಾಜ್ಯಗಳ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳುತ್ತದೆ.

► ಪ್ರತಿಯೊಬ್ಬರ ಮನೆಗೂ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮನೆಗಳಿಗೂ ಸೇರಿ, ಪ್ರತಿಯೊಬ್ಬ ರೈತರ ಪಂಪ್ ಸೆಟ್ಟಿಗೂ, ಪ್ರತಿಯೊಬ್ಬ ನೇಕಾರರ ಮಗ್ಗಗಳಿಗೂ... ಎಲ್ಲ ವೃತ್ತಿಗಳವರಿಗೂ ಸುಮಾರು 22.5 ಕೋಟಿ ಪ್ರೀಪೇಡ್ ಸ್ಮಾರ್ಟ್ ಮಿೀಟರ್‌ಗಳನ್ನು ಅಳವಡಿಸುತ್ತಾರಂತೆ.

► ಪ್ರೀ ಪೇಡ್ ಮೀಟರ್‌ಗಳೆಂದರೆ ನಮ್ಮ ಮೊಬೈಲ್‌ಗಳನ್ನು ರೀಚಾರ್ಜ್ ಮಾಡಿದ ಹಾಗೆ ಬಳಕೆಗೆ ಮೊದಲೇ ಹಣ ಕಟ್ಟಬೇಕು. ಕರೆನ್ಸಿ ಇರುವವರೆಗೆ ವಿದ್ಯುತ್ ಸರಬರಾಜಾಗುತ್ತದೆ. ಕರೆನ್ಸಿ ಮುಗಿದ ತಕ್ಷಣ ವಿದ್ಯುತ್ ಡಿಸ್ ಕನೆಕ್ಟ್ ಆಗುತ್ತದೆ.

► ಮೋದಿಯವರ ಸರಕಾರ ಹೇಳುವ ಪ್ರಕಾರ ಸಂಪೂರ್ಣ ಕ್ರಾಸ್ ಸಬ್ಸಿಡಿಗಳನ್ನು ನಿಲ್ಲಿಸುತ್ತಾರಂತೆ.

►ಜನರು ಮೊದಲು ಹಣ ತುಂಬಬೇಕಂತೆ ನಂತರ ಸರಕಾರ ನೇರ ನಗದನ್ನು ರೈತರ ಖಾತೆಗಳಿಗೆ ಹಾಕುತ್ತದಂತೆ.

ಮುಖ್ಯವಾಗಿ ಇವು ವಿದ್ಯುತ್ ಕಾಯ್ದೆಯ ತಿದ್ದುಪಡಿಯ ಉದ್ದೇಶಗಳಾಗಿವೆ.

ದೇಶದ ವಿದ್ಯುತ್ ಸರಬರಾಜು ಕಂಪೆನಿಗಳು ಸುಮಾರು 4.5 ಲಕ್ಷ ಕೋಟಿ ರೂ.ಗಳಷ್ಟು ನಷ್ಟದಲ್ಲಿವೆ. ಹಾಗಾಗಿ ವಿದ್ಯುತ್ ಇಲಾಖೆಗಳ ನಿರ್ವಹಣೆಯನ್ನು ಸರಕಾರ ಮಾಡಲಾಗದು ಎಂದು ಹೇಳುತ್ತಿದೆ. ಇದು ನಿಜವಲ್ಲ. ಹೇಗೆಂದರೆ;

► ಮೊದಲನೆಯದಾಗಿ ವಿದ್ಯುತ್ ಉತ್ಪಾದನೆ, ವಿತರಣೆ ಮತ್ತು ಸರಬರಾಜು ಕಂಪೆನಿಗಳನ್ನು ಪ್ರತ್ಯೇಕವಾಗಿ ನೋಡುವ ಕ್ರಮವೇ ತಪ್ಪು. ದೇಶದ ಅನೇಕ ಸರಕಾರಿ ಸರಬರಾಜು ಕಂಪೆನಿಗಳು ದೊಡ್ಡ ಮಟ್ಟದ ಲಾಭದಲ್ಲಿವೆ. ಉದಾಹರಣೆಗೆ ಪವರ್ ಗ್ರಿಡ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ಎಂಬ ಸರಕಾರಿ ಕಂಪೆನಿಯು ನವರತ್ನ ಕಂಪೆನಿಯಾಗಿದೆ. ಬೃಹತ್ ಬಂಡವಾಳ ಹೊಂದಿದೆ. ಲಾಭದಲ್ಲೂ ಇದೆ. ಈ ರೀತಿಯ ಅನೇಕ ಕಂಪೆನಿಗಳಿವೆ.

► ಇಂದು ವಿದ್ಯುತ್ ಉತ್ಪಾದನೆಯದೂ ಸಮಸ್ಯೆ ಅಲ್ಲ. ಅವೂ ದೊಡ್ಡ ಮಟ್ಟದ ಲಾಭ ಮಾಡುತ್ತಿವೆ.

► 2011ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಒಂದು ಯೂನಿಟ್ ಸೋಲಾರ್ ಉತ್ಪಾದಿಸಲು ಸುಮಾರು 15 ರೂ.ಗೆ ಒಡಂಬಡಿಕೆ ಮಾಡಿಕೊಂಡಿದ್ದಾರಂತೆ. ಈಗ ಸೋಲಾರ್ ಉತ್ಪಾದಕರು 2 ರೂ. ಆಸುಪಾಸಿಗೆ ಒಂದು ಯೂನಿಟ್‌ನ್ನು ಮಾರಲು ತಯಾರಿದ್ದಾರೆ. 2 ರೂ.ಗಳಿಗೆ ಮಾರಿದರೂ ಅವರಿಗೆ ಲಾಭ ಸಿಗುತ್ತಿದೆ.

► ಉಳಿದಂತೆ ವಿತರಣಾ ಕಂಪೆನಿಗಳು ಜನರೊಂದಿಗೆ ನೇರ ವ್ಯವಹಾರದಲ್ಲಿರುತ್ತವೆ. ಜನರನ್ನು ಇವರೆಲ್ಲ ಗ್ರಾಹಕರು ಅನ್ನುತ್ತಾರೆ. ಸಮಸ್ಯೆ ಇರುವುದೇ ಇಲ್ಲಿ. ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಬಾರದು ಅವರನ್ನು ಸಾಧ್ಯವಾದಷ್ಟು ಕಬ್ಬಿನ ಹಾಗೆ ಹಿಂಡಿ ಹಣ ವಸೂಲಿ ಮಾಡಿಕೊಳ್ಳಬೇಕು ಎಂಬುದು ಅವರ ಮೂಲ ಉದ್ದೇಶ.

► ವಿದ್ಯುತ್ ಕಂಪೆನಿಗಳಿಗೆ ನಷ್ಟವಾಗುತ್ತಿದೆ ಎಂದು ಹೇಳಲು ಕಾರಣವೇನು ಗೊತ್ತೇ? ದೇಶದ ಡಿಸ್ಕಾಂಗಳು ಮತ್ತು ಸರಬರಾಜು ಕಂಪೆನಿಗಳು ಮೂಲಭೂತ ಸೌಕರ್ಯಗಳಿಗಳಿಗಾಗಿ ಕಳೆದ ಹತ್ತು ವರ್ಷಗಳಲ್ಲಿ ವಿಪರೀತ ಹೂಡಿಕೆ ಮಾಡಿವೆ. ನಾವೆಲ್ಲರೂ ಗಮನಿಸಿದಂತೆ ದೇಶದ ಉದ್ದಗಲಕ್ಕೂ ವಿದ್ಯುತ್ ಕಾರಿಡಾರ್‌ಗಳನ್ನು, ವಿದ್ಯುತ್ ಲೈನ್‌ಗಳನ್ನು ನಿರ್ಮಿಸಲಾಗಿದೆ. ನಗರಗಳಲ್ಲಿ ನೆಲದಡಿ ಕೇಬಲ್‌ಗಳನ್ನು ಹಾಕಲಾಗಿದೆ. ಇದೆಲ್ಲವೂ ಜನರ ದುಡಿಮೆಯಿಂದ ಸಂಪಾದಿಸಿದ ಹಣದಲ್ಲಿಯೇ ಮಾಡಲಾಗಿದೆ. ಹಾಗಾಗಿ ಹೆಚ್ಚು ಹೂಡಿಕೆ ಮಾಡಿರುವುದರಿಂದ ತಕ್ಷಣಕ್ಕೆ ನಷ್ಟ ಎಂದು ಕಾಣಿಸುತ್ತದೆ. ಹೂಡಿಕೆ ಕಡಿಮೆಯಾದಂತೆ ಲಾಭದ ಪ್ರಮಾಣ ಹೆಚ್ಚುತ್ತದೆ.

► ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚಲು ಮುಖ್ಯ ಕಾರಣ; 2010ರಲ್ಲಿ ಪ್ರತಿ ಟನ್ ಕಲ್ಲಿದ್ದಲಿಗೆ 50 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಆದರೆ 2016ರ ಮಾರ್ಚ್ 1ರಿಂದ ಪ್ರತಿ ಟನ್‌ಗೆ 400 ರೂ. ಶುಲ್ಕ ವಿಧಿಸಲಾಗುತ್ತಿದೆ. ಕಲ್ಲಿದ್ದಲಿನ ಸಾಗಣೆ, ತೆರಿಗೆ, ಶುಲ್ಕ ಇತ್ಯಾದಿಗಳೆಲ್ಲ್ಲಾ ಮೋದಿಯವರ ಕಾಲದಲ್ಲಿ ಶೇ.340ರಷ್ಟು ಹೆಚ್ಚಾಗಿವೆ. ಹಾಗಾದ್ದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಮೋದಿಯವರಿಗೆ ಮನಸ್ಸಿದ್ದರೆ ಮೊದಲು ಈ ದರಗಳನ್ನು ಕಡಿಮೆ ಮಾಡಬೇಕು.

► ಇದಕ್ಕೂ ಮಿಗಿಲಾಗಿ ಅದಾನಿ ಮುಂತಾದವರು ಕಲ್ಲಿದ್ದಲು ಬಳಸಿ ಉಷ್ಣ ವಿದ್ಯುತ್ ಉತ್ಪಾದಿಸುವ ಅನೇಕ ಕಂಪೆನಿಗಳನ್ನು ಹೊಂದಿದ್ದಾರೆ. ಅವರು ರಾಜ್ಯ ಸರಕಾರಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳು ಮುಗಿದು ಹೋಗುತ್ತಿವೆ. ಜೊತೆಗೆ ಅವರು ಆಸ್ಟ್ರೇಲಿಯಾ ಮುಂತಾದ ಕಡೆ ಕಲ್ಲಿದ್ದಲು ಗಣಿಗಳನ್ನು ಖರೀದಿಸಿಟ್ಟಿದ್ದಾನೆ. ಕರ್ನಾಟಕವೂ ಸೇರಿದಂತೆ ರಾಜ್ಯ ಸರಕಾರಗಳು ಯಥೇಚ್ಛವಾಗಿ ಸೋಲಾರ್ ಮತ್ತು ವಿಂಡ್ ಪವರ್ ಸ್ಥಾವರಗಳನ್ನು ಸ್ಥಾಪಿಸುತ್ತಿವೆ. ಇವುಗಳಿಂದಾಗಿ ಅಗ್ಗದ ದರದಲ್ಲಿ ವಿದ್ಯುತ್ ಲಭ್ಯವಾಗುತ್ತಿದೆ ಮತ್ತು ಪರಿಸರಕ್ಕೆ ಕಾರ್ಬನ್ ಡೈ ಆಕ್ಸೈಡ್ ಸೇರುವುದೂ ತಪ್ಪುತ್ತದೆ. ಇದೆಲ್ಲದರಿಂದ ಬೆಚ್ಚಿ ಕೂತಿರುವ ಅಂಬಾನಿ ಮುಂತಾದವರು ವಿದ್ಯುತ್ ಉತ್ಪಾದನೆ ಮತ್ತು ವಿತರಣೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ. ಇವರ ತಾಳಕ್ಕೆ ಬಿಜೆಪಿ ಸರಕಾರಗಳು ಕುಣಿಯುತ್ತಿವೆ. ದೇಶದ ಜನ ಒಂದೇ ಸಮನೆ ವಿನಾಶದ ಹಾದಿಗೆ ಬೀಳುತ್ತಿದ್ದಾರೆ.

► ಕರ್ನಾಟಕದಲ್ಲಿ ಈ ಅದಾನಿಯು ಉಡುಪಿಯಲ್ಲಿ ಯುಪಿಸಿಎಲ್ ಎಂಬ ಉಷ್ಣ ವಿದ್ಯುತ್ ಕಂಪೆನಿಯನ್ನು ಹೊಂದಿದ್ದಾರೆೆ. ಈ ಕಂಪೆನಿಯಿಂದ 1,080 ಮೆ. ವ್ಯಾಟ್ ವಿದ್ಯುತ್ ಖರೀದಿಸಲು ಒಡಂಬಡಿಕೆಯಾಗಿದೆ. ಈ ಕಂಪೆನಿಗೆ 2019-20ರಲ್ಲಿ 1,092 ಕೋಟಿ ರೂ. ಪಾವತಿಸಲಾಗಿದೆ. ಆದರೆ ನಮ್ಮ ರಾಜ್ಯವು ಈ ಕಂಪೆನಿಯಿಂದ ವಿದ್ಯುತ್ ಪಡೆದು ಪಾವತಿಸಬೇಕಾದ್ದಕ್ಕಿಂತ 505 ಕೋಟಿ ರೂ. ಹೆಚ್ಚಿಗೆ ಪಾವತಿಸಿದೆ. ಈತನ ಕಂಪೆನಿಗೆ ಅಡ್ಡಾದಿಡ್ಡಿ ಹಣವನ್ನು ಅಧಿಕಾರಿಗಳು ಪಾವತಿಸುತ್ತಿದ್ದಾರೆ. ಈತ ಪ್ರತಿ ತಿಂಗಳೂ ಬೆಲೆ ಏರಿಕೆಯಲ್ಲಿ ವ್ಯತ್ಯಾಸ ಮಾಡುತ್ತಿದ್ದಾನೆ. ಅನ್ನು ಪ್ರಶ್ನಿಸದೆ ಅಧಿಕಾರಿಗಳು ಬಾಯಿ ಮುಚ್ಚಿಕೊಂಡು ಪಾವತಿಸುತ್ತಿದ್ದಾರೆ. ಈ ಕುರಿತು ಜಂಟಿ ಸದನ ಸಮಿತಿ ರಚಿಸಬೇಕೆಂದು ಒತ್ತಾಯಿಸಿದ್ದೆ. ಈಗ ಅದೇ ಜಿಲ್ಲೆಯ ಶಾಸಕರಿಗೆ ಇಂಧನ ಇಲಾಖೆ ನೀಡಲಾಗಿದೆ.

► ಈ ಎಲ್ಲ ವ್ಯವಸ್ಥೆಯ್ನೂ ಮಾಡಿ ಈಗ ಅದಾನಿ, ಅಂಬಾನಿ, ಟಾಟಾ ಮುಂತಾದವರಿಗೆ ವಿದ್ಯುತ್ ಕ್ಷೇತ್ರದಿಂದ ಲಾಭ ದೋಚಿಕೊಳ್ಳಲು ಅವಕಾಶ ಕಲ್ಪಿಸಲು ಮೋದಿಯವರ ಬಿಜೆಪಿ ಸರಕಾರ ಹೊರಟಿದೆ.

2014-15 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯದ ವಿದ್ಯುತ್ ಉತ್ಪಾದನೆ ಕೇವಲ 14 ,825 ಮೆಗಾವ್ಯಾಟ್ ಇತ್ತು. ಅದರಲ್ಲಿ ಸೋಲಾರ್‌ನಿಂದ 118, ಗಾಳಿ ಮೂಲದಿಂದ 2,655, ಜಲಮೂಲದಿಂದ 3,773 ುತ್ತು ಕಲ್ಲಿದ್ದಲ ಮೂಲದಿಂದ 6,197

ಮೆಗಾವ್ಯಾಟ್ ಸೇರಿ ಒಟ್ಟು 14,825 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಮಳೆ ಬಾರದೆ ಅಣೆಕಟ್ಟುಗಳು ಭರ್ತಿಯಾಗದಿದ್ದರೆ ನೀರಿನ ಮೂಲದಿಂದ ಉತ್ಪಾದನೆಯಾಗಬೇಕಾದ ವಿದ್ಯುತ್ ಸಿಗುತ್ತಿರಲಿಲ್ಲ. ಆಗಲೂ ರಾಜ್ಯದ ವಿದ್ಯುತ್ ಬೇಡಿಕೆ 8.5 ರಿಂದ 9.0 ಸಾವಿರ ಮೆಗಾವ್ಯಾಟ್‌ಗಳಷ್ಟಿ್ತು. ಆದರೆ ನಾವು ತೆಗೆದುಕೊಂಡ ನಿರ್ಣಯಗಳಿಂದಾಗಿ 2017-18ರ ಅಂತ್ಯದ ವೇಳೆಗೆ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 26,025 ಮೆಗಾವ್ಯಾಟ್‌ಗಳವರೆಗೆ ಏರಿಕೆಯಾಯಿತು. ಇದರಲ್ಲಿ 9,700 ಮೆಗಾವ್ಯಾಟ್ ವಿದ್ಯುತ್ ಗಾಳಿ ಮತ್ತು ಬಿಸಿಲನ್ನು ಅವಲಂಬಿಸಿ ಉತ್ಪಾದಿಸುವ ಮಟ್ಟಕ್ಕೆ ಹೆಚ್ಚಿಸಿದ್ದೆವು.

ಈಗ ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ನಮ್ಮ ಗರಿಷ್ಠ ಬಳಕೆ 10,500 ಮೆಗಾವ್ಯಾಟ್ ಇದೆ. ನಮ್ಮ ರಾಜ್ಯದ ಒಟ್ಟಾರೆ ವಿದ್ಯುತ್ ಉತ್ಪಾದನೆ 31,000 ಮೆಗಾವ್ಯಾಟ್ ಇದೆ. ಈಗ ರಾಜ್ಯ ಸರಕಾರ ಮಾಡಬೇಕಿರುವುದು ನಮ್ಮಲ್ಲಿನ ವಿದ್ಯುತ್ ಅನ್ನು ಮಾರಾಟ ಮಾಡಿ ಆದಾಯ ಗಳಿಸುವುದು ಮತ್ತು ನಮ್ಮ ರಾಜ್ಯದ ರೈತರಿಗೆ, ನೇಕಾರರು ಮುಂತಾದವರಿಗೆ ಉಚಿತ ವಿದ್ಯುತ್ ನೀಡುವುದು ಮತ್ತು ಸಣ್ಣ ಕೈಗಾರಿಕೆಗಳು ಹಾಗೂ ಗೃಹ ಕೈಗಾರಿಕೆಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ವಿದ್ಯುತ್ ನೀಡಿ ಉತ್ಪಾದನೆ ಹೆಚ್ಚಿಸಿ ರಾಜ್ಯವನ್ನು ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಬೇಕು. ಯಾವ ದೇಶದಲ್ಲಿ ವಿದ್ಯುತ್, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಮತ್ತು ಮನುಷ್ಯರ ಜೀವನಾವಶ್ಯಕ ವಸ್ತುಗಳ ಬೆಲೆ ಕೈಗೆಟಕುವ ದರಗಳಲ್ಲಿ ಲಭ್ಯವಾಗುತ್ತವೋ ಅಲ್ಲಿ ನೆಮ್ಮದಿ ಇರುತ್ತದೆ. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಕೇವಲ ಶೇ.5-6 ಶ್ರೀಮಂತರನ್ನು ಬಿಟ್ಟು ಉಳಿದವರು ಬದುಕಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಿದ್ದರೆ ಏನು ಮಾಡಬೇಕು?

► ಉಚಿತವಾಗಿ, ರಿಯಾಯಿತಿ ದರದಲ್ಲಿ ವಿದ್ಯುತ್ ನೀಡುವುದು ಕಲ್ಯಾಣ ರಾಷ್ಟ್ರದ ಪ್ರಧಾನ ಆಶಯ ಎಂದು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮನಗಂಡಿದ್ದರು. ಅವರೇ ಕ್ರಾಸ್ ಸಬ್ಸಿಡಿ ವ್ಯವಸ್ಥೆಯನ್ನು 1948ರ ವಿದ್ಯುತ್ ಕಾಯ್ದೆ ಮೂಲಕ ಜಾರಿಗೆ ತಂದವರು. ಹಾಗೆ ಮಾಡಿದ್ದರಿಂದ ರೈತರಿಗೆ, ಕುಶಲ ಕರ್ಮಿಗಳಿಗೆ ಗುಡಿ ಕೈಗಾರಿಕೆಗಳಿಗೆ, ಮಗ್ಗಗಳಿಗೆ ಉಚಿತ/ ರಿಯಾಯಿತಿ ದರದಲ್ಲಿ ವಿದ್ಯುತ್ ದೊರೆತು ದೇಶವು ಆಹಾರ ಉತ್ಪಾದನೆಯಲ್ಲಿ, ಬಟ್ಟೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಯಿತು. ಕೆಲವು ಸಾವಿರ ಟನ್ ಗೋಧಿಗಾಗಿ ವಿಶ್ವದ ಮುಂದೆ ಬೇಡುವಂಥ ಸ್ಥಿತಿಗೆ ತಳ್ಳಿದ್ದ ಬ್ರಿಟಿಷರಿಂದ ದೇಶವನ್ನು ಸ್ವತಂತ್ರಗೊಳಿಸಿ ನೆಹರೂರವರು ವಿಶ್ವದ ಎದುರು ತಲೆ ಎತ್ತಿ ನಿಲ್ಲುವ ಸ್ಥಿತಿಗೆ ತಂದರು. ಈ ಉಚಿತ, ರಿಯಾಯಿತಿ ದರದಲ್ಲಿ ವಿದ್ಯುತ್ ನೀಡುವ ಪ್ರಕ್ರಿಯೆಯು ಈ ವರೆಗೂ ಮುಂದುವರಿಯುತ್ತಿದೆ. ಇದು ಮುಂದುವರಿಯಬೇಕು.

► ನಮ್ಮಲ್ಲಿ ಯಥೇಚ್ಛವಾಗಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಇತರರಿಗೆ ಮಾರಾಟ ಮಾಡಿ ಸರಕಾರದ ಕಂಪೆನಿಗಳನ್ನು ಲಾಭದ ಹಳಿಗೆ ತರಬಹುದು.

► ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೂ ನಮ್ಮಲ್ಲಿ 20 ಸಾವಿರ ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಲಭ್ಯವಿದೆ. ನಮ್ಮಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್‌ನಲ್ಲಿ ಶೇ.26-29ರಷ್ಟು ಬಳಕೆಯಾಗುತ್ತಿದೆ. ಉಳಿದ ವಿದ್ಯುತ್ ಅನ್ನು ಯಾಕೆ ಮಾರುತ್ತಿಲ್ಲ?

► ಕರ್ನಾಟಕವು ಕೇಂದ್ರ ಸರಕಾರದ ಸೆಂಟ್ರಲ್ ಗ್ರಿಡ್‌ನಿಂದ 5,514 ಮೆ.ವ್ಯಾಟ್ ಗಳನ್ನು ಖರೀದಿಸುತ್ತಿದೆ. ಆದರೆ ಬಳಕೆ ಮಾಡುತ್ತಿರುವುದು ಇದರಲ್ಲಿ ಅರ್ಧ ಮಾತ್ರ. ನಾವು 4,388 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಪಾವತಿಸುತ್ತಿದ್ದೇವೆ. ಪಾವತಿಸಬೇಕಿರುವುದು ಕೇವಲ 1,787 ಕೋಟಿ ರೂ. ಮಾತ್ರ. ಉಳಿದ 2,601 ಕೋಟಿ ರೂ.ಗಳನ್ನು ಸುಖಾ ಸುಮ್ಮನೆ ನೀಡುತ್ತಿದ್ದೇವೆ. ಇದು ತಪ್ಪಬೇಕು. ಬಳಕೆ ಆಧರಿಸಿ ಪಾವತಿ ಮಾಡಬೇಕು.

► ಒಪ್ಪಂದದ ಅವಧಿ ಮುಗಿದರೂ, ಮುಗಿಯುತ್ತಿದ್ದರೂ ಖರೀದಿಸಲಾಗುತ್ತಿರುವ ಅದಾನಿ ಮುಂತಾದ ಕಂಪೆನಿಗಳಿಂದ ಖರೀದಿಯನ್ನು ನಿಲ್ಲಿಸಿದರೆ ಪ್ರತಿ ವರ್ಷ ಸುಮಾರು 7,000 ಕೋಟಿ ರೂ.ಗಳನ್ನು ಉಳಿಸಬಹುದು. ಹಾಗಾಗಿ ಕೂಡಲೇ ರಾಜ್ಯ ಸರಕಾರವು ಅವಧಿ ಮುಗಿದಿರುವ ಕಂಪೆನಿಗಳ ಒ್ಪಂದವನ್ನು ರದ್ದು ಮಾಡಬೇಕು.

► ಕೇಂದ್ರದ ಕತೆಯೂ ಹೀಗೆ ಇದೆ. ಈಗ ಅಗತ್ಯವಾಗಿ ಮಾಡಬೇಕಿರುವುದು ಸುಧಾರಣೆಯನ್ನೇ ಹೊರತು ದೇಶ ವಿನಾಶ ಮಾಡುವ ಕೃತ್ಯವ್ನಲ್ಲ ಎಂದು ಅರ್ಥಮಾಡಿಕೊಳ್ಳಬೇಕು.

ಮೋದಿಯವರು ಈ ಕಾಯ್ದೆಯನ್ನು ಜಾರಿಗೆ ತಂದರೆ ಏನಾಗುತ್ತದೆ?

► ನಮ್ಮ ಸಂವಿಧಾನದ 7 ನೇ ಅನುಸೂಚಿಯ ಪ್ರಕಾರ ವಿದ್ಯುಚ್ಛಕ್ತಿಯು ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ ರಾಜ್ಯಗಳ ಮೇಲೆ ಕೇಂದ್ರವು ಸವಾರಿ ಮಾಡುವಂತಿಲ್ಲ. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯಗಳನ್ನು ಒಂದೇ ಸಮನೆ ದಮನ ಮಾಡುತ್ತಿದ್ದಾರೆ. ಈ ಕಾಯ್ದೆ ಜಾರಿಗೊಂಡರೆ ರೈತರು, ಬಡವರು, ಮಧ್ಯಮ ವರ್ಗದವರು, ಕುಶಲಕರ್ಮಿಗಳು, ನೇಕಾರರು, ಗುಡಿ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳವರು ಸಂಪೂರ್ಣ ನಾಶವಾಗಿ ಹೋಗುತ್ತಾರೆ.

► ಉಚಿತ ಮತ್ತು ರಿಯಾಯಿತಿ ದರದಲ್ಲಿ ವಿದ್ಯುತ್ ಪಡೆಯುತ್ತಿದ್ದವರು ದೇಶದ ಅಭಿವೃದ್ಧಿಗೆ ಬೃಹತ್ ಕೊಡುಗೆಯನ್ನು ಕೊಡುತ್ತಾ ಬಂದಿದ್ದಾರೆ. ಅವರ ಮೇಲೆ ಬೆಲೆ ಏರಿಕೆಯ ಒತ್ತಡ ಬೀಳುತ್ತದೆ.

► ವಿದ್ಯುತ್ ಬೆಲೆಗಳನ್ನು ಕಾರ್ಪೊರೇಟ್ ಬಂಡವಾಳಿಗರು ನಿರ್ಧರಿಸುವುದರಿಂದ ಜನರು ಕುಡಿಯುವ ನೀರು, ಆಹಾರ ಪದಾರ್ಥಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತವೆ.

► ದೇಶದ ವಿದ್ಯುತ್ ಇಲಾಖೆಗಳ ವಲಯದಲ್ಲಿ ಸುಮಾರು 25 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಬಹುಪಾಲು ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ.

► ಮೋದಿಯವರು ಈಗ ರೈತರು ಮುಂತಾದ ವಲಯಗಳಿಗೆ ಹೇಳುತ್ತಿರುವ ಮಾತು, ಮೊದಲು ನೀವು ಬಳಕೆ ಮಾಡುತ್ತಿರುವ ವಿದ್ಯುತ್‌ಗೆ ಮೀಟರ್ ಹಾಕಿಸಿಕೊಳ್ಳಿ, ಹಣ ಕಟ್ಟಿ ಚಾರ್ಜ್ ಮಾಡಿಸಿಕೊಳ್ಳಿ ನಂತರ ನಾವು ನಿಮ್ಮ ಅಕೌಂಟ್‌ಗೆ ನೇರವಾಗಿ ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು.

► ಮೋದಿಯವರ ಸಬ್ಸಿಡಿ ನೀತಿಯ ಹಿಂದಿನ ಕುತಂತ್ರ ಏನು ಎಂಬುದು ದೇಶದ ಜನರಿಗೆ ಈಗಾಗಲೇ ಅರ್ಥವಾಗಿದೆ. ಅಡುಗೆ ಗ್ಯಾಸ್ ಸಿಲಿಂಡರ್ ವಿಚಾರದಲ್ಲೂ ಹೀಗೆ ಹೇಳಿದ್ದರು. ಸ್ವಲ್ಪ ಕಾಲ ನೂರಿನ್ನೂರು ರೂಪಾಯಿಗಳನ್ನು ಜನರ ಅಕೌಂಟಿಗೆ ಹಾಕಿದರು. 2019 ರಿಂದ ಇಡೀ ಸಬ್ಸಿಡಿಯನ್ನೇ ನಿಲ್ಲಿಸಿಬಿಟ್ಟರು. ಈಗ ವಿದ್ಯುತ್ ವಿಚಾರದಲ್ಲೂ ಹಾಗೆ ಮಾಡುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

► ಜನರು ಹೆಚ್ಚು ಪ್ರಶ್ನೆ ಕೇಳಿದರೆ ದೇಶದ ಅಭಿವೃದ್ಧಿ ಎನ್ನುತ್ತಾರೆ. ಮೋದಿಯವರ ಪ್ರಕಾರ ದೇಶವೆಂದರೆ ಅದಾನಿ, ಅಂಬಾನಿಗಳು ಮಾತ್ರ ಎಂದು ದೇಶದ ಜನರಿಗೆ ಈಗ ಅರ್ಥವಾಗುತ್ತಿದೆ.

► ಯಾವ ದೃಷ್ಟಿಯಿಂದ ನೋಡಿದರೂ ಮೋದಿಯವರು ನಮ್ಮ ದೇಶವನ್ನು ಉಳಿಸುವುದಿಲ್ಲ. ಈ ಸತ್ಯ ಈಗೀಗ ಕೆಲವರಿಗೆ ಅರ್ಥವಾಗುತ್ತಿದೆ. ಜನರು ಎಷ್ಟು ಬೇಗ ಅರ್ಥಮಾಡಿಕೊಂಡರೆ ಅಷ್ಟರ ಮಟ್ಟಿಗೆ ನಮ್ಮ ದೇಶವನ್ನು ಉಳಿಸಿಕೊಳ್ಳಲು ಸಾಧ್ಯ.

ಕೇಂದ್ರ, ರಾಜ್ಯ ಬಿಜೆಪಿ ಸರಕಾರಗಳು ಈ ಜನದ್ರೋಹಿ ಕಾಯ್ದೆಗಳನ್ನು ಯಾವ ಕಾರಣಕ್ಕೂ ಜಾರಿಗೆ ತರಬಾರದು. ಜನರೆಂದರೆ ದೇಶ, ಜನದ್ರೋಹವೆಂಬುದು ನಿಜವಾದ ದೇಶದ್ರೋಹ. ಜನರಿಗೆ ದ್ರೋಹ ಮಾಡಿ ಕಾರ್ಪೊರೇಟ್ ಬಂಡವಾಳಿಗರ ಪರ ನಿಲ್ಲುವುದು ದೇಶ ಪ್ರೇಮವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಬಲವಂತವಾಗಿ ದೇಶದ ಮೇಲೆ ಹೇರಲು ಹೊರಟಿರುವ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂದೆಗೆದುಕೊಳ್ಳಬೇಕು. ದೇಶವ್ಯಾಪಿ ರೈತರು ಮತ್ತು ವಿವಿಧ ಜನಸಮುದಾಯಗಳು ನಡೆಸುತ್ತಿರುವ ಹೋರಾಟವನ್ನು ಅರ್ಥಮಾಡಿಕೊಂಡು ಅವರೊಂದಿಗೆ ಪ್ರಜಾತಾಂತ್ರಿಕ ಸ್ಫೂರ್ತಿಯೊಂದಿಗೆ ನಡೆದುಕೊಳ್ಳಬೇಕು.

ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಮತ್ತು ಹಸಿರು ಶಾಲುಗಳನ್ನು ಹೆಗಲ ಮೇಲೆ ಹಾಕಿೊಂಡು ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳು ಹಾಗೂ ರಾಜ್ಯ ಸರಕಾರ ಕೂಡಲೇ ಕೇಂದ್ರ ಸರಕಾರದ ಮೇಲೆ ಒತ್ತಡಗಳನ್ನು ತಂದು ಈ ಮನೆಹಾಳು, ದುಷ್ಟ ಕಾಯ್ದೆಗಳನ್ನು ಜಾರಿಗೊಳಿಸದಂತೆ ಕ್ರಮವಹಿಸಬೇಕೆಂದು ಆಗ್ರಹಿಸುತ್ತೇನೆ.SHARE THIS

Author:

0 التعليقات: