Monday, 9 August 2021

ಮೇಕೆದಾಟು ಯೋಜನೆಗೆ ಶೀಘ್ರ ಕೇಂದ್ರದ ಅನುಮೋದನೆ: ಸಿಎಂ ಬಸವರಾಜ ಬೊಮ್ಮಾಯಿ


 ಮೇಕೆದಾಟು ಯೋಜನೆಗೆ ಶೀಘ್ರ ಕೇಂದ್ರದ ಅನುಮೋದನೆ: ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು : ಮೇಕೆದಾಟು ಯೋಜನೆಯ ಡಿಪಿಆರ್ ಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಅನುಮೋದನೆ ದೊರೆಯುವ ವಿಶ್ವಾಸವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.

ಮೈಸೂರು ಪ್ರವಾಸದಲ್ಲಿರುವ ಅವರು ಚಾಮುಂಡೇಶ್ವರಿಯ ದರ್ಶನ ಪಡೆದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಮೇಕೆದಾಟು ಯೋಜನೆಯ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಕಳೆದ ಬಾರಿ ದೆಹಲಿಗೆ ತೆರಳಿದಾಗ ಈ ಯೋಜನೆಗೆ ಒಪ್ಪಿಗೆ ನೀಡುವುದಾಗಿ ಭರವಸೆ ದೊರೆತಿದೆ. ಇದಕ್ಕೆ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಇದು ಪೂರ್ಣಗೊಂಡ ಕೂಡಲೇ ಕೇಂದ್ರದ ಒಪ್ಪಿಗೆ ದೊರೆಯುವ ವಿಶ್ವಾಸವಿದೆ. ಮತ್ತೊಮ್ಮೆ ಈ ಉದ್ದೇಶಕ್ಕಾಗಿಯೇ ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ವಿವರಿಸಲಾಗುವುದು. ಸುಪ್ರೀಂ ಕೋರ್ಟಿನ ಆದೇಶಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. 


SHARE THIS

Author:

0 التعليقات: