ಹೊಸದಿಲ್ಲಿ: "ಕೇವಲ ಸಂಸತ್ತಿಗೆ ವರದಿ ಸಲ್ಲಿಸುವಂತಿರುವ ಸ್ವಾಯತ್ತ ಸಂಸ್ಥೆಯಾಗಿ ಸಿಬಿಐ ಇರಬೇಕು. ಭಾರತದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾದಂತೆ ಸಿಬಿಐಗೆ ಸ್ವಾಯತ್ತತೆಯಿರಬೇಕು ಹಾಗೂ ಅದು ಕೇವಲ ಸಂಸತ್ತಿಗೆ ಮಾತ್ರ ಉತ್ತರದಾಯಿತ್ವ ಹೊಂದಿರಬೇಕು. "ಪಂಜರದ ಗಿಣಿ(ಸಿಬಿಐ)'' ಅನ್ನು ಬಿಡುಗಡೆಗೊಳಿಸುವ ಯತ್ನವಾಗಿ ಈ ತೀರ್ಪು ನೀಡಲಾಗಿದೆ,'' ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಹೇಳಿದೆ.
ಸಿಬಿಐಗೆ ಶಾಸನಬದ್ಧ ಸ್ಥಾನಮಾನ ನೀಡಿದಾಗ ಮಾತ್ರ ಅದೊಂದು ಸ್ವಾಯತ್ತ ಸಂಸ್ಥೆಯಾಗಬಹುದು ಎಂದು ನ್ಯಾಯಾಲಯ ಹೇಳಿದೆ. "ಸಿಬಿಐಗೆ ಶಾಸನಬದ್ಧ ಸ್ಥಾನಮಾನ ಮತ್ತು ಹೆಚ್ಚು ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಆದಷ್ಟು ಬೇಗ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಕಾಯಿದೆಯನ್ನು ಜಾರಿಗೆ ತರುವ ನಿರ್ಧಾರವನ್ನು ಕೈಗೊಳ್ಳುವ ಕುರಿತು ಭಾರತ ಸರಕಾರ ಪರಿಶೀಲಿಸಬೇಕು. ಸರಕಾರದ ಯಾವುದೇ ಆಡಳಿತಾತ್ಮಕ ನಿಯಂತ್ರಣವಿಲ್ಲದೆ ಸಿಬಿಐಗೆ ಕಾರ್ಯನಿರ್ವಹಿಸಲು ಸ್ವಾತಂತ್ರ್ಯ ಒದಗಿಸಬೇಕು,'' ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ತಮಿಳುನಾಡಿನಲ್ಲಿ ನಡೆದಿದೆಯೆನ್ನಲಾದ ರೂ. 300 ಕೋಟಿ ಪೋನ್ಝಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಎನ್ ಕಿರುಬಕರನ್ ಮತ್ತು ಬಿ ಪುಗೆಲೆಂಧಿ ಅವರ ಪೀಠ ಮೇಲಿನಂತೆ ಹೇಳಿದೆ.
"ಸಿಬಿಐಯನ್ನು ಚುನಾವಣಾ ಆಯೋಗ ಮತ್ತು ಸಿಎಜಿಯಂತೆ ಹೆಚ್ಚು ಸ್ವತಂತ್ರಗೊಳಿಸಬೇಕು. ಸಿಬಿಐ ನಿರ್ದೇಶಕರಿಗೆ ಭಾರತ ಸರಕಾರದ ಕಾರ್ಯದರ್ಶಿಯಷ್ಟೇ ಅಧಿಕಾರ ನೀಡಬೇಕು ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮುಖಾಂತರ ಹೋಗದೆ ನೇರವಾಗಿ ಪ್ರಧಾನಿ ಅಥವಾ ಸಂಬಂಧಿತ ಸಚಿವರಿಗೆ ವರದಿ ಮಾಡುವಂತಿರಬೇಕು,'' ಎಂದು ನ್ಯಾಯಾಲಯ ಹೇಳಿದೆ.
ಪೋನ್ಝಿ ಹಗರಣದ ಪ್ರಕರಣದ ತನಿಖೆಯನ್ನು ವರ್ಗಾಯಿಸುವುದಕ್ಕೆ ಕೇಂದ್ರದ ವಿರೋಧಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಸಿಬಿಐ ಸಂಸ್ಥೆಯ ಸಂಪೂರ್ಣ ಪುನರ್ಸಂಘಟನೆಯನ್ನು ಒಂದು ತಿಂಗಳೊಳಗೆ ಮಾಡುವ ಕುರಿತು ಸರಕಾರ ಒಂದು ನಿರ್ಧಾರ ಕೈಗೊಳ್ಳಬೇಕು,'' ಎಂದು ಹೇಳಿದೆ.
0 التعليقات: