Wednesday, 11 August 2021

ಕೇರಳದ ಗ್ರಾಮೀಣ ಮಹಿಳೆ ಇದೀಗ ಯುಎಇ ಉದ್ಯಮ ಸಮೂಹದ ಎಂಡಿ


ಕೇರಳದ ಗ್ರಾಮೀಣ ಮಹಿಳೆ ಇದೀಗ ಯುಎಇ ಉದ್ಯಮ ಸಮೂಹದ ಎಂಡಿ

ದುಬೈ: ಕೇರಳದ ಪುಟ್ಟ ಗ್ರಾಮದ ಹಸೀನಾ ನಿಶಾದ್ 2008ರಲ್ಲಿ ತಮ್ಮ ಪದವಿ ಪೂರ್ಣಗೊಳಿಸಿ, ವಿವಾಹವಾಗಿ ಯುಎಇ ಸೇರಿದಾಗ ಅವರಿಗೆ ಇದ್ದ ಕನಸು ಉತ್ತಮ ಗೃಹಿಣಿಯಾಗಿ ತಮ್ಮ ಮೂವರು ಸಹೋದರಿಯರಿಗೆ ನೆರವು ನೀಡುವುದು ಮಾತ್ರ. ಆದರೆ ಅಲ್ಪಕಾಲದಲ್ಲೇ ವ್ಯವಹಾರ ಜಗತ್ತಿಗೆ ಕಾಲಿಟ್ಟ ಅವರು ತಮ್ಮ ಉದ್ಯಮಶೀಲ ಪತಿ ನಿಶಾದ್ ಹುಸೈನ್ ಅವರ ಬೆಂಬಲದೊಂದಿಗೆ ಸಾವಿರಾರು ಉದ್ಯೋಗಿಗಳು ಇರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬೆಳೆದಿದ್ದಾರೆ.

32 ವರ್ಷದ ಹಸೀನಾ ಇದೀಗ ಮಾನವ ಸಂಪನ್ಮೂಲ, ಗುತ್ತಿಗೆ, ಸೌಲಭ್ಯಗಳ ನಿರ್ವಹಣೆ ಮತ್ತು ರಿಯಲ್ ಎಸ್ಟೇಟ್ ಮತ್ತಿತರ ವ್ಯವಹಾರ ನಡೆಸುವ ವರ್ಲ್ಡ್ ಸ್ಟಾರ್ ಹೋಲ್ಡಿಂಗ್ಸ್‌ನ ಮುಖ್ಯಸ್ಥೆ.

"ನಾನು ಯುಎಇಗೆ ಆಗಮಿಸಿದಾಗಿನಿಂದಲೂ ಪತಿಯಿಂದ ಪ್ರತಿದಿನ ಕಂಪನಿಯ ಚಟುವಟಿಕೆಗಳ ಬಗ್ಗೆ ವಿಚಾರಿಸುತ್ತಿದ್ದೆ" ಎಂದು ಅವರು ವಿವರಿಸುತ್ತಾರೆ. ಈ ಮೂಲಕ ವ್ಯವಹಾರ ಕ್ಷೇತ್ರ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು. ಮೂವರು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನಿಭಾಯಿಸುತ್ತಲೇ ವ್ಯವಹಾರ ಕೌಶಲ ಮತ್ತು ಪ್ರತಿದಿನ ಎದುರಾಗುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡರು.

2014ರಲ್ಲಿ ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದ ಬಳಿಕ ಹಸೀನಾ ವ್ಯವಹಾರ ಜಗತ್ತಿನಲ್ಲಿ ಹುಸೈನ್‌ಗೆ ಸಹಕರಿಸಲು ನಿರ್ಧರಿಸಿದರು. ಈ ಪ್ರಯತ್ನಕ್ಕೆ ಪತಿಯ ಸಹಕಾರವೂ ಸಿಕ್ಕಿತು. "ನಾನು ವಾಣಿಜ್ಯ ಪದವೀಧರೆಯಾಗಿದ್ದ ಕಾರಣ ನನಗೆ ಅದು ನೆರವಾಯಿತು" ಎಂದು ಹಸೀನಾ ಹೇಳುತ್ತಾರೆ.

ಹಸೀನಾ, ಶಾರ್ಜಾದಲ್ಲಿರುವ ಕಂಪನಿಯ ಕೇಂದ್ರ ಕಚೇರಿಯ ಉಸ್ತುವಾರಿ ವಹಿಸಿಕೊಂಡ ಬಳಿಕ ಪತಿ ತಮ್ಮ ವ್ಯವಹಾರವನ್ನು ದುಬೈ ಮತ್ತು ಅಬುಧಾಬಿಗೆ ವಿಸ್ತರಿಸುವತ್ತ ಗಮನ ಹರಿಸಿದರು. ಅಲ್ಪಕಾಲದಲ್ಲೇ ವ್ಯವಹಾರ ಚಾತುರ್ಯವನ್ನು ಬೆಳೆಸಿಕೊಂಡ ಹಸೀನಾ ಉದ್ಯಮ ಸಮೂಹದ ಕಾರ್ಯಚಟುವಟಿಕೆಗಳ ಮೇಲೆ ಹಿಡಿತ ಸಾಧಿಸಿದರು. ಉದ್ಯೋಗಿಗಳ ಕಲ್ಯಾಣಕ್ಕೆ ಗಮನ ಹರಿಸಿದ್ದಲ್ಲದೇ ಸಮಸ್ಯೆಗಳಿಗೆ ಸಹಾಕರಿಕ ಪರಿಹಾರವನ್ನು ಹುಡುಕುವತ್ತ ಗಮನ ಕೇಂದ್ರೀಕರಿಸಿದರು.

ತಮ್ಮ ಸಾಂಪ್ರದಾಯಿಕ ಉಡುಗೆ ಶೈಲಿ ಅಥವಾ ಕುಟುಂಬ ಸಂಪ್ರದಾಯ ವಿಚಾರದಲ್ಲಿ ಯಾವ ರಾಜಿಯನ್ನೂ ಮಾಡಿಕೊಳ್ಳದೇ ಇವೆಲ್ಲವನ್ನೂ ನಿಭಾಯಿಸಿದರು. 5000ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗದ ಮೂಲಕ ನೆರವಾಗಿರುವ ಈ ಸಮೂಹ ಇದೀಗ ಉದ್ಯೋಗಿಗಳಿಗೆ ಸಾಧ್ಯವಾದಷ್ಟೂ ಅತ್ಯುತ್ತಮ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಅವರು ವಿವರಿಸುತ್ತಾರೆ.

ಕೋವಿಡ್-19 ಸಾಂಕ್ರಾಮಿಕ ಹಲವು ಪಾಠಗಳನ್ನು ಕಲಿಸಿದೆ ಎಂದು ಅವರು ಹೇಳುತ್ತಾರೆ. ಈ ಸಂದರ್ಭದಲ್ಲಿ ಹಲವು ಪ್ರಮುಖ ಕಂಪನಿಗಳು ಹಿನ್ನಡೆ ಅನುಭವಿಸಿ ಮುಚ್ಚುವ ಸ್ಥಿತಿಗೆ ಬಂದಿದ್ದರೆ, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ನಡುವೆಯೂ ತಮ್ಮ ಕಂಪನಿ ಪ್ರಗತಿ ದಾಖಲಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಹತ್ತು ಮಂದಿ ಮೃತಪಟ್ಟಿದ್ದಾರೆ. ಇನ್ನು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆಯ ಆರಂಭದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಕನಿಷ್ಠ 13 ಜನರನ್ನು ಅವಶೇಷಗಳಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೆ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಟಾಟಾ ಸುಮೋದಲ್ಲಿದ್ದ 8 ಮಂದಿ ಮೃತಪಟ್ಟಿದ್ದು ಅವರ ಮೃತದೇಹಗಳನ್ನು ತೆಗೆಯಲಾಗಿದೆ ಎಂದರು.

ಕಿನ್ನೌರ್ ಜಿಲ್ಲೆಯ ನಿಚಾರ್ ತಹಸಿಲ್‌ನ ನಿಗುಲಸರಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಐದರಲ್ಲಿರುವ ಚೌರಾ ಗ್ರಾಮದಲ್ಲಿ ಮಧ್ಯರಾತ್ರಿ ಭೂಕುಸಿತ ಸಂಭವಿಸಿದೆ ಎಂದು ಅವರು ಹೇಳಿದರು.

ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ(ಎಚ್‌ಆರ್‌ಟಿಸಿ) ಬಸ್ ಚಾಲಕ ಮಹಿಂದರ್ ಪಾಲ್ ಸೇರಿದಂತೆ 13 ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ(ಎಚ್‌ಆರ್‌ಟಿಸಿ) ಬಸ್ ಸೇರಿದಂತೆ ಹಲವು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ ಎಂದು ಉಪ ಆಯುಕ್ತ ಅಬಿದ್ ಹುಸೇನ್ ಸಾದಿಕ್ ಅವರು ಹೇಳಿದ್ದರು.

ಸ್ಥಳಕ್ಕೆ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಮತ್ತು ಸ್ಥಳೀಯ ರಕ್ಷಣಾ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಿನ್ನೌರ್ ಉಪ ಆಯುಕ್ತರು ತಿಳಿಸಿದ್ದಾರೆ.SHARE THIS

Author:

0 التعليقات: