Monday, 2 August 2021

ನಮ್ಮ ಮಕ್ಕಳಿಗಾಗಿಯಾದರೂ ನಮ್ಮ ಖಾಸಗಿತನವನ್ನು ಗೌರವಿಸಿ: ಮೌನ ಮುರಿದ ಶಿಲ್ಪಾ ಶೆಟ್ಟಿ


 ನಮ್ಮ ಮಕ್ಕಳಿಗಾಗಿಯಾದರೂ ನಮ್ಮ ಖಾಸಗಿತನವನ್ನು ಗೌರವಿಸಿ: ಮೌನ ಮುರಿದ ಶಿಲ್ಪಾ ಶೆಟ್ಟಿ

ಮುಂಬೈ : ಅಶ್ಲೀಲ ಚಿತ್ರಗಳನ್ನು ತಯಾರಿಸಿ ಅವುಗಳನ್ನು ಆ್ಯಪ್ ಮೂಲಕ ಚಂದಾದಾರರಿಗೆ ಒದಗಿಸುತ್ತಿದ್ದ ಆರೋಪದ ಮೇಲೆ ಪತಿ ರಾಜ್ ಕುಂದ್ರಾ ಬಂಧನದ ಹಲವು ದಿನಗಳ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಮೊದಲ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಈ ಹೇಳಿಕೆಯನ್ನು ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೇರ್ ಮಾಡಿದ್ದಾರೆ ಹಾಗೂ "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಹಾಗೂ ನನ್ನ ಕುಟುಂಬದ ಮಾಧ್ಯಮ ವಿಚಾರಣೆ ಬೇಕಿಲ್ಲ, ಕಾನೂನಿನಂತೆಯೇ ಎಲ್ಲವೂ ಮುಂದುವರಿಯಲಿ. ನಮ್ಮ ಮಕ್ಕಳಿಗಾಗಿಯಾದರೂ ನಮ್ಮ ಖಾಸಗಿತನವನ್ನು ಗೌರವಿಸಿ" ಎಂದು ಅವರು ಬರೆದಿದ್ದಾರೆ.

"ಕಳೆದ ಕೆಲ ದಿನಗಳು ಪ್ರತಿಯೊಂದು ವಿಧದಲ್ಲಿಯೂ ಸವಾಲುಭರಿತವಾಗಿವೆ. ಹಲವಾರು ವದಂತಿಗಳು  ಹಾಗೂ ಆರೋಪಗಳು ಕೇಳಿಬರುತ್ತಿವೆ. ಮಾಧ್ಯಮ ಹಾಗೂ ಹಿತೈಷಿಗಳೆಂದು ಹೇಳಿಕೊಳ್ಳುವವರಿಂದಲೂ ಹಲವಾರು ಆರೋಪಗಳನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ. ಹಲವಾರು ಟ್ರೋಲಿಂಗ್ ನಡೆಯುತ್ತಿದೆ  ಹಾಗೂ ಪ್ರಶ್ನೆಗಳನ್ನೂ ಕೇಳಲಾಗುತ್ತಿದೆ. ನನ್ನ ನಿಲುವು-ನಾನಿನ್ನೂ ಪ್ರತಿಕ್ರಿಯಿಸಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ನಾನು ಇನ್ನು ಮುಂದೆಯೂ ಪ್ರತಿಕ್ರಿಯಿಸುವುದಿಲ್ಲ. 

ನನ್ನದೆಂದು ಹೇಳಿಕೊಂಡು ಸುಳ್ಳು ಹೇಳಿಕೆಗಳನ್ನು ಪ್ರಕಟಿಸಬೇಡಿ. ನಾನು ಯಾವುದೇ ವಿವರಣೆ ನೀಡುವುದಿಲ್ಲ, ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಬಯಸುತ್ತೇನೆ. ನನಗೆ ಮುಂಬೈ ಪೊಲೀಸರು ಹಾಗೂ ನ್ಯಾಯವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆಯಿದೆ. ಸಾಧ್ಯವಿರುವ ಎಲ್ಲಾ ಕಾನೂನಾತ್ಮಕ ಪರಿಹಾರಗಳನ್ನು ನಾವು ಕೈಗೊಂಡಿದ್ದೇವೆ. ನಮ್ಮ ಮಕ್ಕಳಿಗಾಗಿಯಾದರೂ ನಮ್ಮ ಖಾಸಗಿತನವನ್ನು ಗೌರವಿಸಿ" ಎಂದು ಶಿಲ್ಪಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


SHARE THIS

Author:

0 التعليقات: