Wednesday, 4 August 2021

ಪುರೋಹಿತನಿಂದ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಬಾಲಕಿಯ ಕುಟುಂಬವನ್ನು ಭೇಟಿಯಾದ ರಾಹುಲ್ ಗಾಂಧಿ


 ಪುರೋಹಿತನಿಂದ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಬಾಲಕಿಯ ಕುಟುಂಬವನ್ನು ಭೇಟಿಯಾದ ರಾಹುಲ್ ಗಾಂಧಿ

ಹೊಸದಿಲ್ಲಿ: ದಿಲ್ಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಇತ್ತೀಚೆಗೆ ಪುರೋಹಿತ ಹಾಗೂ ಸಹಚರರಿಂದ ಅತ್ಯಾಚಾರಕ್ಕೀಡಾಗಿ ಕೊಲೆಯಾಗಿರುವ ಒಂಬತ್ತು ವರ್ಷದ ದಲಿತ ಬಾಲಕಿಯ ಕುಟುಂಬವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಭೇಟಿ ಮಾಡಿ ಸಾಂತ್ವನ ಹೇಳಿದರು. ದುಷ್ಕರ್ಮಿಗಳು ಬಾಲಕಿಯ ಮೃತದೇಹವನ್ನು ಬಲವಂತವಾಗಿ ಸುಟ್ಟು ಹಾಕಿದ್ದರು.

"ನಾನು ಕುಟುಂಬದೊಂದಿಗೆ ಮಾತನಾಡಿದೆ ... ಅವರಿಗೆ ನ್ಯಾಯ ಬೇಕು. ಮತ್ತೇನೂ ಬೇಡ. ನ್ಯಾಯ ಸಿಗುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅವರಿಗೆ ಸಹಾಯ ಮಾಡಬೇಕು ನಾವು ಅದನ್ನು ಮಾಡುತ್ತೇವೆ.  'ನಾನು ನಿಮ್ಮೊಂದಿಗೆ ನಿಂತಿದ್ದೇನೆ ಎಂದು ಹೇಳಿದ್ದೇನೆ.  ರಾಹುಲ್ ಗಾಂಧಿ  ನ್ಯಾಯ ಸಿಗುವವರೆಗೂ ಅವರ ಜೊತೆಯಲ್ಲಿಯೇ ಇರುತ್ತಾನೆ 'ಎಂದು ರಾಹುಲ್ ಹೇಳಿಕೆಯನ್ನು  ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭೇಟಿಯ  ನಂತರ ಟ್ವೀಟ್ ಮಾಡಿದ ರಾಹುಲ್ ಗಾಂಧಿ: "ಬಾಲಕಿಯ ಹೆತ್ತವರ ಕಣ್ಣೀರು ಒಂದೇ ಒಂದು ಮಾತನ್ನು ಹೇಳುತ್ತಿದೆ. ಅವರ ಮಗಳು, ಈ ದೇಶದ ಮಗಳು ನ್ಯಾಯಕ್ಕೆ ಅರ್ಹಳು. ನಾನು ನ್ಯಾಯದ ಹಾದಿಯಲ್ಲಿ ಅವರೊಂದಿಗೆ ಇದ್ದೇನೆ'' ಎಂದು ಬರೆದಿದ್ದಾರೆ.

ದಿಲ್ಲಿಯಲ್ಲಿ 9ರ ಹರೆಯದ ಬಾಲಕಿಯೋರ್ವಳನ್ನು ಅತ್ಯಾಚಾರ ಮಾಡಿ ಕೊಲೆಗೈದಿರುವುದು ಅತ್ಯಂತ ನಾಚಿಗೇಡಿನ ಸಂಗತಿ. ದಿಲ್ಲಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ. ತಪ್ಪಿತಸ್ಥರಿಗೆ ಮರಣ ದಂಡನೆ ವಿಧಿಸಬೇಕು. ನಾನು ನಾಳೆ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದೇನೆ. ನ್ಯಾಯಕ್ಕಾಗಿ ಈ ಹೋರಾಟದಲ್ಲಿ ಕುಟುಂಬಕ್ಕೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ ಎಂದು ಕೇಜ್ರಿವಾಲ್‌ ಮಂಗಳವಾರ ಟ್ವೀಟ್‌ ಮಾಡಿದ್ದರು. 

ಡಿಸಿಪಿ ಪ್ರತಾಪ್‌ ಸಿಂಗ್‌ ಪ್ರಕಾರ, "ಸಂಜೆ 6 ಗಂಟೆಯ ಸುಮಾರಿಗೆ ಅಲ್ಲೇ ಸಮೀಪ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದ ಬಾಲಕಿಯು ನೀರು ತರಲೆಂದು ಸ್ಮಶಾನದ ವಾಟರ್‌ ಕೂಲ್‌ ಬಳಿ ಬಂದಿದ್ದಳು. ಸ್ವಲ್ಪ ಸಮಯದ ಬಳಿಕ ಪುರೋಹಿತ ಹಾಗೂ ಇತರ ಮೂವರು ಬಾಲಕಿಯ ತಾಯಿಯನ್ನು ಕರೆದು ಆಕೆಯ ಮೃತದೇಹವನ್ನು ತೋರಿಸಿದ್ದರು. ಪೊಲೀಸರಿಗೆ ಮಾಹಿತಿ ನೀಡಿದರೆ ಅವರು ಮರಣೋತ್ತರ ಪರೀಕ್ಷೆ ನಡೆಸಲು ಹೇಳುತ್ತಾರೆ. ವೈದ್ಯರು ಮಗುವಿನ ಎಲ್ಲಾ ಅಂಗಾಂಗಗಳನ್ನು ಕದಿಯುತ್ತಾರೆ" ಎಂದು ಹೇಳಿ ಬಲವಂತವಾಗಿ ಸುಟ್ಟುಹಾಕುವಂತೆ ಮಾಡಿದ್ದರು ಎಂದು ಹೇಳಿದ್ದಾರೆ.


SHARE THIS

Author:

0 التعليقات: