ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಾವಿನ ವಿರುದ್ಧ ಪ್ರತಿಭಟನೆ, ಭಾರತೀಯ ಉದ್ಯಮಗಳ ಮೇಲೆ ಗುಂಪು ದಾಳಿ
ಹೊಸದಿಲ್ಲಿ: ಬೆಂಗಳೂರಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಕಾಂಗೋಲಿಸ್ ವಿದ್ಯಾರ್ಥಿಯ ಸಾವಿನ ವಿರುದ್ಧ ಗುರುವಾರ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿ ಕಿನ್ಷಾಸಾದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಭಾರತೀಯರ ಒಡೆತನದ ಉದ್ಯಮಗಳು ಮತ್ತು ವಾಹನಗಳ ಮೇಲೆ ಗುಂಪು ದಾಳಿಗಳು ನಡೆದಿವೆ.
ಮಾದಕ ದ್ರವ್ಯಗಳನ್ನು ಹೊಂದಿದ್ದ ಆರೋಪದಲ್ಲಿ ಜೋಯೆಲ್ ಶಿಂದಾನಿ ಮಾಲು(27) ಎಂಬಾತನನ್ನು ಆ.1ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಮರುದಿನ ಆತ ಅಲ್ಲಿನ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದ. ಮಾಲು ಹೃದಯ ಸ್ತಂಭನದಿಂದ ಮೃತಪಟ್ಟಿದ್ದು,ಆತನ ಮೈಮೇಲೆ ಗಾಯಗಳಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಆದರೆ ಮಾಲುವನ್ನು ಪೊಲೀಸರು ಥಳಿಸಿದ್ದರು ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಗುರುವಾರ ಗುಂಪು ಭಾರತೀಯರ ಒಡೆತನದ ಅಂಗಡಿಗಳನ್ನು ಲೂಟಿ ಮಾಡಿ ಒಂದು ಕಾರಿಗೆ ಬೆಂಕಿ ಹಚ್ಚಿದ್ದು,ಇತರ ಮೂರು ಕಾರುಗಳಿಗೆ ಕಲ್ಲುಗಳನ್ನೆಸೆದು ಹಾನಿಯನ್ನುಂಟು ಮಾಡಿದೆ ಎಂದು ಕಾಂಗೋ ಪೊಲೀಸರು ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಲೂಟಿ ಮಾಡಲಾಗಿದ್ದ 40 ಬಟ್ಟೆಯ ಬೇಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಿನ್ಷಾಸಾ ಪೊಲೀಸ್ ಆಯುಕ್ತರು ಹೇಳಿದ್ದಾರೆ.
0 التعليقات: