ಫ್ಯೂಚರ್ ಗ್ರೂಪ್ ಸ್ವತ್ತು ಮಾರಾಟ ವಿವಾದ: ರಿಲಯನ್ಸ್ ಗೆ ಹಿನ್ನಡೆ, ಅಮೆಝಾನ್ ಪರ ಸುಪ್ರೀಂ ನಿರ್ಧಾರ
ಹೊಸದಿಲ್ಲಿ: ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೆಝಾನ್ಗೆ ರಿಲಯನ್ಸ್ ಸಂಸ್ಥೆ ವಿರುದ್ಧ ಇಂದು ಸುಪ್ರೀಂ ಕೋರ್ಟ್ ನಲ್ಲಿ ದೊಡ್ಡ ಗೆಲುವು ದೊರಕಿದೆ. ಫ್ಯೂಚರ್ ಗ್ರೂಪ್ ನ ರಿಟೇಲ್ ಸ್ವತ್ತುಗಳನ್ನು ಖರೀದಿಸುವ 3.4 ಬಿಲಯನ್ ಡಾಲರ್ ಒಪ್ಪಂದವನ್ನು ರಿಲಯನ್ಸ್ ಮುಂದುವರಿಸುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಫ್ಯೂಚರ್ ರಿಟೇಲ್ ಮಾರಾಟ ಕುರಿತು ಸಿಂಗಾಪುರದ ಮಧ್ಯಸ್ಥಿಕೆದಾರರ ತೀರ್ಮಾನ ಊರ್ಜಿತವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಮಾರು ರೂ 27,000 ಕೋಟಿಗೂ ಅಧಿಕ ಮೊತ್ತಕ್ಕೆ ತನ್ನ ಪಾಲುದಾರ ಸಂಸ್ಥೆ ಫ್ಯೂಚರ್ ಗ್ರೂಪ್, ತನ್ನ ರಿಟೇಲ್ ಸ್ವತ್ತುಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ಗೆ ಮಾರಾಟ ಮಾಡಲು ಒಪ್ಪಿ ಗುತ್ತಿಗೆ ಒಪ್ಪಂದವನ್ನು ಮೀರಿದೆ ಎಂದು ಆರೋಪಿಸಿ ಅಮೆಝಾನ್ ಕಳೆದ ವರ್ಷ ಕೋರ್ಟ್ ಮೆಟ್ಟಿಲು ಹತ್ತಿತ್ತು. ಆದರೆ ತಾನೇನೂ ನಿಯಮ ಉಲ್ಲಂಘಿಸಿಲ್ಲ ಎಂದು ಫ್ಯೂಚರ್ ಗ್ರೂಪ್ ವಾದಿಸಿತ್ತು.
ಸಿಂಗಾಪುರದ ತುರ್ತು ಮಧ್ಯಸ್ಥಿಕೆದಾರರು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಫ್ಯೂಚರ್ ರಿಟೇಲ್ಗೆ ರಿಲಯನ್ಸ್ ರಿಟೇಲ್ ಜತೆ ವಿಲೀನಗೊಳಿಸುವುದಕ್ಕೆ ತಡೆ ಹೇರಿದ್ದರು. ಈ ನಿರ್ಧಾರ ಮಾನ್ಯವಾಗಿದೆ ಎಂದು ಇಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದರೆ ಸಿಂಗಾಪುರದ ಮಧ್ಯಸ್ಥಿಕೆದಾರರ ಅಂತಿಮ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದೆ.
ಆದರೆ ನಿರ್ಧಾರವನ್ನು ವಿರೋಧಿಸಿ ರಿಲಯನ್ಸ್ ದಿಲ್ಲಿ ಹೈಕೋರ್ಟ್ ಕದ ತಟ್ಟಿದ್ದರೂ ನ್ಯಾಯಾಲಯ ಆ ತೀರ್ಮಾನ ಮಾನ್ಯ ಎಂದು ಹೇಳಿತ್ತು. ಫ್ಯೂಚರ್ ಗ್ರೂಪ್ನ ಕಿಶೋರ್ ಬಿಯಾನಿ ಅವರ ಸೊತ್ತುಗಳನ್ನು ವಶಪಡಿಸಿಕೊಳ್ಳುವಂತೆಯೂ ಏಕಸದಸ್ಯ ಪೀಠ ಹೇಳಿತ್ತಲ್ಲದೆ ಅವರೇಕೆ ಮೂರು ತಿಂಗಳು ಜೈಲು ಶಿಕ್ಷೆಗೊಳಗಾಗಬಾರದು ಎಂದು ಪ್ರಶ್ನಿಸಿತ್ತು.
ಆದರೆ ಮುಂದೆ ಫೆಬ್ರವರಿಯಲ್ಲಿ ದಿಲ್ಲಿ ಹೈಕೋರ್ಟಿನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ಹೇರಿದಾಗ ಅಮೆಝಾನ್ ಸುಪ್ರೀಂ ಕೋರ್ಟಿನ ಕದ ತಟ್ಟಿತ್ತು.
ತಾನು 2019ರಲ್ಲಿ ಫ್ಯೂಚರ್ ಗ್ರೂಪ್ ಜತೆಗೆ ನಡೆಸಿದ ಒಪ್ಪಂದದಂತೆ ಅದು ಭಾರತದಲ್ಲಿರುವ ತನ್ನ ರಿಟೇಲ್ ಸ್ವತ್ತುಗಳನ್ನು ರಿಲಯನ್ಸ್ ಕೂಡ ಸೇರಿರುವ ತನ್ನ ʼನಿರ್ಬಂಧಿತ ಜನರ ಪಟ್ಟಿ'ಯಲ್ಲಿರುವವರಿಗೆ ಮಾರಾಟ ಮಾಡಬಾರದು ಎಂದಿದೆ ಎಂದು ಅಮೆಝಾನ್ ಹೇಳಿತ್ತು.
0 التعليقات: