Sunday, 15 August 2021

ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವಕ್ಕೆ `ಹೊಸ ಯೋಜನೆ'ಗಳ ಘೋಷಿಸಿದ ಸಿಎಂ ಬೊಮ್ಮಾಯಿ

 

ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವಕ್ಕೆ `ಹೊಸ ಯೋಜನೆ'ಗಳ ಘೋಷಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: `ಎಪ್ಪತ್ತೈದನೆ ಸ್ವಾತಂತ್ರ್ಯ ದಿನಾಚರಣೆಯ `ಅಮೃತ ಮಹೋತ್ಸವ'ದ ಹಿನ್ನೆಲೆಯಲ್ಲಿ ಅಮೃತ ಗ್ರಾಮ ಪಂಚಾಯಿತಿಗಳು, ಗ್ರಾಮೀಣ ವಸತಿ, ನಿರ್ಮಲ ನಗರ, ಅಮೃತ ರೈತ ಉತ್ಪಾದಕ ಸಂಸ್ಥೆಗಳು, ಆರೋಗ್ಯ ಮೂಲಸೌಕರ್ಯ ಉನ್ನತ್ತೀಕರಣ ಸೇರಿದಂತೆ ನಾಡಿನ ಜನತೆಗೆ ಹೊಸದಾಗಿ `ಅಮೃತ ಯೋಜನೆ'ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಘೋಷಿಸಿದ್ದಾರೆ. 

ರವಿವಾರ 75ನೆ ಸ್ವಾತಂತ್ರ್ಯೋತ್ಸವ ಅಂಗವಾಗಿ ನಗರದಲ್ಲಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಹಲವು ನೂತನ ಘೋಷಣೆಗಳನ್ನು ಪ್ರಕಟಿಸಿದ ಅವರು, `ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಮ್ಮ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ಮುಂದಾಗಿದ್ದು, ಈ ಪೈಕಿ `ಅಮೃತ ಗ್ರಾಮ ಪಂಚಾಯಿತಿ' ಅಡಿ ಆಯ್ದ 750 ಗ್ರಾ.ಪಂ.ಗಳಲ್ಲಿ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರು ಸೇರಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ ಅನುಷ್ಠಾನಗೊಳಿಸಲಾಗುವುದು ಎಂದರು. 

ಅದೇ ರೀತಿ, `ಅಮೃತ ಗ್ರಾಮೀಣ ವಸತಿ ಯೋಜನೆ'ಯಡಿ ಆಯ್ದ 750 ಗ್ರಾ.ಪಂ.ಗಳಲ್ಲಿ ವಸತಿ ರಹಿತ ಮತ್ತು ಆಶ್ರಯ ರಹಿತರನ್ನು ಗುರುತಿಸಿ ವಸತಿ ಕಲ್ಪಿಸಲಾಗುವುದು. ಅಮೃತ ರೈತ ಉತ್ಪಾದಕ ಸಂಸ್ಥೆಗಳು ಯೋಜನೆಯಡಿ ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿ ಪ್ರತಿ ಸಂಸ್ಥೆಗೆ 30ಲಕ್ಷ ರೂ.ನಂತೆ ಮೂರು ವರ್ಷದ ಅವಧಿಗೆ 225ಕೋಟಿ ರೂ.ಅನುದಾನ ನೀಡಲಾಗುವುದು ಎಂದು ಪ್ರಕಟಿಸಿದರು.

`ಅಮೃತ ನಿರ್ಮಲ ನಗರ' ಯೋಜನೆಯಡಿ ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ಯೋಜನೆ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ 1ಕೋಟಿ ರೂ.ನಂತೆ 75 ಕೋಟಿ ರೂ. ಗಳನ್ನು ಒದಗಿಸಲಾಗುವುದು. `ಅಮೃತ ಶಾಲಾ ಸೌಲಭ್ಯ ಯೋಜನೆ'ಯಲ್ಲಿ ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10ಲಕ್ಷ ರೂ.ಗಳಂತೆ 75ಕೋಟಿ ರೂ. ಗಳನ್ನು ಮೀಸಲು. ಹಾಗೇ, ಅಮೃತ ಅಂಗನವಾಡಿ ಕೇಂದ್ರಗಳ ಅಡಿಯಲ್ಲಿ ಆಯ್ದ 750 ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಪ್ರತಿ ಕೇಂದ್ರಗಳ ಮೂಲಸೌಕರ್ಯ ಅಂಗನವಾಡಿಗೆ ತಲಾ 1ಲಕ್ಷ ರೂ.ನಂತೆ 7.5ಕೋಟಿ ರೂ.ಹಣ  ವಿನಿಯೋಗಿಸಲಾಗುವುದು ಎಂದು ವಿವರಿಸಿದರು.

ಅಮೃತ ಸ್ವಸಹಾಯ ಕಿರು ಉದ್ದಿಮೆಗಳಿಗೆ ಆಯ್ದ 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ 1ಲಕ್ಷ ರೂ.ನಂತೆ 75ಕೋಟಿ ರೂ.ಬೀಜ ಧನವನ್ನು(ಸೀಡ್‍ಮನಿ) ನೀಡಲಾಗುವುದು. ಅಮೃತ ಸಮುದಾಯ ಅಭಿವೃದ್ಧಿ ಯೋಜನೆಅಡಿ ಆಯ್ದ 750 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಪ್ರೇರೇಪಿಸಲಾಗುವುದು ಎಂದರು. 

ಜತೆಗೆ, ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆಯಲ್ಲಿ ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಉನ್ನತೀಕರಣಕ್ಕೆ ತಲಾ 20ಲಕ್ಷ ರೂ.ಗಳಂತೆ 150ಕೋಟಿ ರೂ.ವೆಚ್ಚ ಮಾಡಲಾಗುವುದು. ಅಮೃತ ಕೌಶಲ್ಯ ತರಬೇತಿ ಯೋಜನೆಯಲ್ಲಿ ಎಸ್ಸಿ-ಎಸ್ಟಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಕ-ಯುವತಿಯರ ಕೌಶ್ಯಾಭಿಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಯನ್ನು 112ಕೋಟಿ ರೂ.ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.

ಮುಖ್ಯವಾಗಿ ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ ಟೋಕಿಯೋ ಒಲಂಪಿಕ್ಸ್‍ನಲ್ಲಿ ಭಾರತದ ಮತ್ತು ಕರ್ನಾಟಕದ ಕ್ರೀಡಾ ಪಟುಗಳ ಸಾಧನೆ ಗಮನಾರ್ಹವಾದುದು. ಮುಂದಿನ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಪದಕ ವಿಜೇತ ಸಾಮಥ್ರ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ ಜಾರಿಗೊಳಿಸಲಾಗಿದೆ. ಒಟ್ಟಾರೆ, ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಅಸ್ಮಿತೆಯನ್ನು ಕಾಪಾಡಲು ನಾವು ಶಕ್ತರಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಜೀವನ ಮಟ್ಟ ಸುಧಾರಣೆಗೆ ಆದ್ಯತೆ: 

ಬೆಂಗಳೂರು ಉತ್ತಮ ಹವಾಗುಣ, ಶೈಕ್ಷಣಿಕ ವಿಶ್ವಮಾನ್ಯ ಸೌಲಭ್ಯಗಳು, ನಗರವಾಗಿದೆ. ಬೆಳೆಯುತ್ತಿರುವ ಕೈಗಾರಿಕೋದ್ಯಮಗಳು ಜಾಗತಿಕ ಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟಿವೆ.

ಈ ಹೆಗ್ಗಳಿಕೆಗೆ ತಕ್ಕಂತೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಿ, ಜೀವನಮಟ್ಟವನ್ನು ಉನ್ನತೀಕರಿಸಲು ಆದ್ಯತೆ ನೀಡಲಾಗಿದೆ. ಇನ್ನು, ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಯಡಿ 8343.87 ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಅಮೃತ ಮಹೋತ್ಸವ ನಗರೋತ್ಥಾನ ಯೋಜನೆಯನ್ನು ಮೂರನೇ ಹಂತದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು. 


SHARE THIS

Author:

0 التعليقات: