ಸಚಿವ ಮುರುಗೇಶ ನಿರಾಣಿ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ
ಬೆಂಗಳೂರು: ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಸಂದೇಶ ಕಳುಹಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಮುರುಗೇಶ್ ನಿರಾಣಿ ವಿರುದ್ಧ ನಗರದ ನ್ಯಾಯಾಲಯ ತನಿಖೆಗೆ ಆದೇಶಿಸಿದೆ.
ಗೋವಿಂದರಾಮ್ ಎಂಬವರು ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಆದೇಶ ನೀಡಿದೆ. ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಾಲಯ, ನಗರದ ಕೊಡಿಗೇಹಳ್ಳಿ ಪೊಲೀಸರಿಗೆ ಸೆ.13 ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದೆ.
ಕಳೆದ ವರ್ಷ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಮುರುಗೇಶ್ ನಿರಾಣಿ ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಸಂದೇಶ ಕಳುಹಿಸಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.
ತನ್ನ ವಿರುದ್ಧ ನ್ಯಾಯಾಲಯ ತನಿಖೆಗೆ ಆದೇಶಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮುರುಗೇಶ್ ನಿರಾಣಿ, ಹಿಂದೂ ದೇವತೆಗಳಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪದ ಕುರಿತಾಗಿ ನನ್ನ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ದೇಶದ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಜವಾಬ್ದಾರಿಯುತ ಪ್ರಜೆಯಾಗಿ ನ್ಯಾಯಾಲಯ ನೀಡಿರುವ ಆದೇಶಕ್ಕೆ ಬದ್ಧನಾಗಿದ್ದೇನೆ. ಹಿಂದೂ ಧರ್ಮ, ಆಚಾರ- ವಿಚಾರ, ಸಂಪ್ರದಾಯ ಹಾಗೂ ದೇವತೆಗಳ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಯಾವುದೇ ಸಂದರ್ಭದಲ್ಲೂ ಹಿಂದೂ ಧರ್ಮಕ್ಕಾಗಲಿ, ದೇವತೆಗಳ ಬಗ್ಗೆಯಾಗಲಿ ಅಪಮಾನ ಮಾಡುವ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.
0 التعليقات: