ಒಲಿಂಪಿಕ್ಸ್ ಪದಕ ಗೆದ್ದ ಪಿ.ವಿ ಸಿಂಧು ಜೊತೆ ಐಸ್ ಕ್ರೀಮ್ ಸೇವಿಸಿ ಭರವಸೆ ಈಡೇರಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ತಮ್ಮ ನಿವಾಸದಲ್ಲಿ ಭಾರತೀಯ ಒಲಿಂಪಿಕ್ಸ್ ತಂಡದೊಂದಿಗೆ ಬೆಳಗ್ಗಿನ ಉಪಹಾರ ಸೇವಿಸಿದರು. ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ “ಚುರ್ಮಾ’’ ತಿನಿಸಿನ ವ್ಯವಸ್ಥೆ ಮಾಡಿರುವ ಪ್ರಧಾನಿ ಒಲಿಂಪಿಕ್ಸ್ ಗೆ ಮೊದಲು ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ನೀಡಿದ್ದ ಭರವಸೆವೊಂದನ್ನು ಈಡೇರಿಸಿದರು.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ನೀನು ಪದಕ ಜಯಿಸಿದರೆ ನಿನ್ನೊಂದಿಗೆ ಐಸ್ ಕ್ರೀಮ್ ಸೇವಿಸುವೆ ಎಂದು ಪ್ರಧಾನಮಂತ್ರಿ ಮೋದಿ ಅವರು ಒಲಿಂಪಿಕ್ಸ್ ಗೆ ಮೊದಲು ಸಿಂಧುಗೆ ಭರವಸೆ ನೀಡಿದ್ದರು. ಸಿಂಧು ಒಲಿಂಪಿಕ್ಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ಸೋತ ಬಳಿಕ ಕಂಚಿನ ಪದಕ ಗೆದ್ದುಕೊಂಡಿದ್ದರು.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿ 41 ವರ್ಷಗಳ ಒಲಿಂಪಿಕ್ಸ್ ಪದಕದ ಕನಸು ಈಡೇರಿಸಿದ್ದ ಭಾರತೀಯ ಪುರುಷರ ಹಾಕಿ ತಂಡವು ಹಸ್ತಾಕ್ಷರವಿರುವ ಹಾಕಿ ಸ್ಟಿಕ್ ವೊಂದನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಿದರು.
ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಜಯಿಸಿದ್ದ ಕುಸ್ತಿ ತಂಡ ಕೂಡ ಪ್ರಧಾನಿಗೆ ಸ್ಮರಣಿಕೆ ನೀಡಿತು.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಒಟ್ಟು 7 ಪದಕಗಳನ್ನು ಜಯಿಸಿದ್ದ ಭಾರತವು ಸರ್ವಶ್ರೇಷ್ಠ ಪ್ರದರ್ಶನ ನೀಡಿತ್ತು.
0 التعليقات: